ಹೈಪಟೈಟೀಸ್ ನಿರ್ಲಕ್ಷಿಸಬೇಡಿ

Published on

ಬಳ್ಳಾರಿ : ಯಕೃತ್ತಿನ ಮೇಲೆ ಪರಿಣಾಮ ಬೀರುವ ಹೆಪಟೈಟೀಸ್-ಬಿ ಒಂದು ವೈರಸ್ ಸೋಂಕಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಆರಂಭದಲ್ಲಿಯೇ ರೋಗ ನಿಯಂತ್ರಣಕ್ಕೆ ಸಹಕರಿಸಿ ಎಂದು ರಾಷ್ಟ್ರೀಯ ವೈರಲ್ ಹೈಪಟೈಟೀಸ್ ನಿಯಂತ್ರಣ ಕಾರ್ಯಕ್ರಮದ ಉಪನಿರ್ದೇಶಕಿ ಡಾ.ಎನ್.ಶಕೀಲಾ ಹೇಳಿದರು.

ಇಲ್ಲಿನ ಡಿಎಚ್‌ಒ ಸಭಾಂಗಣದಲ್ಲಿ ರಾಷ್ಟ್ರೀಯ ವೈರಲ್ ಹೆಪಟೈಟೀಸ್ ನಿಯಂತ್ರಣ ಕಾರ್ಯಕ್ರಮದ ಮೂಲಕ ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳು, ಫಿಜಿಷಿಯನ್, ತಜ್ಞ ವೈದ್ಯರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಾಮಾನ್ಯವಾಗಿ ಕಾಮಾಲೆ ಎಂದು ಕರೆಸಿಕೊಳ್ಳುವ ಹೆಪಟೈಟೀಸ್-ಬಿ ಸೋಂಕು ಆರಂಭದಲ್ಲಿ ಚಿಹ್ನೆಗಳನ್ನು ಗುರ್ತಿಸಲು ಸಾಧ್ಯವಾಗುವುದಿಲ್ಲ. ಕ್ರಮೇಣ ಚರ್ಮ ಮತ್ತು ಕಣ್ಣುಗಳ ಹಳದಿ, ಗಾಢ ಮೂತ್ರ, ತೀವ್ರ ಆಯಾಸ, ವಾಕರಿಕೆ, ವಾಂತಿ ಸ್ನಾಯು ಮತ್ತು ಕೀಲು ನೋವು, ಹಸಿವಾಗದಿರುವಿಕೆ, ಹೊಟ್ಟೆ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದು, ಈ ಹಂತದಲ್ಲಿಯೂ ನಿರ್ಲಕ್ಷಿಸಿದರೆ ಗಂಭೀರ ಸ್ಥಿತಿಗೆ ರೋಗಿಯ ಆರೋಗ್ಯ ಬದಲಾಗಬಹುದು. ಇದಕ್ಕಾಗಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಮತ್ತು ಪರೀಕ್ಷೆ ಕೈಗೊಳ್ಳಲಾಗುತ್ತಿದ್ದು, 2030 ರ ವೇಳೆಗೆ ಹೆಪಟೈಟೀಸ್ ಮುಕ್ತ ದೇಶವನ್ನಾಗಿಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಡಿಎಚ್‌ಒ ಡಾ.ವೈ. ರಮೇಶ ಬಾಬು ಮಾತನಾಡಿ, ಸಾಮಾನ್ಯವಾಗಿ ಹೆಪಟೈಟೀಸ್-ಬಿ ಸೋಂಕು ಹೊಂದಿದ ವ್ಯಕ್ತಿಯ ರಕ್ತ ಮತ್ತು ಇತರ ದೈಹಿಕ ದ್ರವಗಳು ಇನ್ನೊಬ್ಬ ವ್ಯಕ್ತಿಯ ದೇಹದಲ್ಲಿ ಸೇರಿದ ಸಂದರ್ಭದಲ್ಲಿ ರೋಗ ಹರಡುವ ಸಾಧ್ಯತೆಯಿದೆ ಎಂದರು.

ಈ ನಿಟ್ಟಿನಲ್ಲಿ ಎಲ್ಲ ಗರ್ಭಿಣಿಯರಿಗೆ ಕಡ್ಡಾಯ ಹೆಪಟೈಟೀಸ್-ಬಿ ತಪಾಸಣೆ, ನವಜಾತ ಶಿಶು ಮತ್ತು ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವುದು, ಹೆಚ್ಚು ಅಪಾಯಕಾರಿ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಆರೋಗ್ಯ ಕಾರ್ಯಕರ್ತೆಯರು ತಪ್ಪದೇ ಲಸಿಕೆ ಪಡೆಯಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net