ಹಕ್ಕಿಜ್ವರ ಭಯಬೇಡ ಎಚ್ಚರವಿರಲಿ

Published on

ಬಳ್ಳಾರಿ : ಹಕ್ಕಿಜ್ವರ ಪಕ್ಷಿಗಳಿಗೆ ಹರಡುವ ಖಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಮಿಕವಾಗಿ ಹರಡುವುದಿಲ್ಲ.

ಆದ್ದರಿಂದ,, ಸಾರ್ವಜನಿಕರು ಭಯಬೇಡ ಎಚ್ಚರವಿರಲಿ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ನಗರದ ಡಿಸಿ ಕಚೇರಿಯಲ್ಲಿ ಹಕ್ಕಿಜ್ವರ ಸಂಬಂಧಿಸಿದಂತೆ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಾಮಾನ್ಯವಾಗಿ ಶೀಥಲ ಪ್ರದೇಶದ ವಲಸೆ ಹಕ್ಕಿಗಳು ವಂಶಾಭಿವೃದ್ಧಿಗಾಗಿ ಬಂದಾಗ ಹಿಕ್ಕೆ, ಪುಕ್ಕ ಹಾಗೂ ಬಾಯಿ ಮತ್ತು ಕಣ್ಣಿನಿಂದ ಹೊರ ಬರುವ ಸ್ರವಿಕೆಯಿಂದ ಕಾಯಿಲೆ ಹರಡು ಸಂಭವವಿದ್ದು, ಪಕ್ಷಿಗಳಿಗೆ ರೋಗವು ಹರಡುತ್ತದೆ. ಕೋಳಿ ಮಾಂಸ ಹಾಗೂ ಮೊಟ್ಟೆಗಳನ್ನು 70 ಡಿಗ್ರಿ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಬೇಯಿಸಿದಾಗ ವೈರಾಣು ನಾಶಗೊಳ್ಳುತ್ತದೆ. ಹಾಗಾಗಿ ಸಾರ್ವಜನಿಕರು ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿದ ನಂತರ ಸೇವನೆ ಮಾಡಬೇಕು ಎಂದು ಹೇಳಿದರು.

ಫೆ.28 ರಂದು ಕಪ್ಪಗಲ್ ಗ್ರಾಮದಲ್ಲಿ ಇಂಟಿಗ್ರೇಷನ್ ಪದ್ಧತಿಯಲ್ಲಿ ಮಾಂಸದ ಕೋಳಿಗಳನ್ನು ಸಾಕಾಣಿಕೆ ಮಾಡುವ ಕೇಂದ್ರದಲ್ಲಿ ಅಸಹಜವಾಗಿ ಕೋಳಿಗಳು ಮರಣ ಹೊಂದಿದ್ದವು. ಪಶು ಪಾಲನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಒಟ್ಟು 15,000 ಕೋಳಿಗಳ ಪೈಕಿ 8,000 ಕೋಳಿಗಳು ಮರಣ ಹೊಂದಿದ್ದವು. ಉಳಿದ ಏಳು ಸಾವಿರ ಕೋಳಿಗಳನ್ನು ಇಲಾಖೆಯ ಅಧಿಕಾರಿಗಳು ಸಾಯಿಸಿದ್ದಾರೆ. ಅಸಹಜವಾಗಿ ಮೃತಪಟ್ಟ ಎಂಟು ಸಾವಿರ ಕೋಳಿಗಳ ಸಾವಿನ ವರದಿ ಬರಲಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 74 ಮಾಂಸದ ಕೋಳಿ ಫಾರಂ ಹಾಗೂ 14 ಮೊಟ್ಟೆ ಕೋಳಿ ಸಾಕಾಣಿಕೆ ಕೇಂದ್ರಗಳಿವೆ ಹಾಗೂ 1,30,221 ಹಿತ್ತಲ ಕೋಳಿ ಇವೆ. ಹಕ್ಕಿಜ್ವರ ಕಂಡಿರುವ ಕೋಳಿ ಸಾಕಾಣಿಕೆ ಕೇಂದ್ರವನ್ನು ನಿರ್ಭಂಧಿತ ಪ್ರದೇಶವೆಂದು ಘೋಷಿಸಿ ವಾಹನಗಳ ಮತ್ತು ಸಾರ್ವಜನಿಕರ ಪ್ರವೇಶ ನಿಷೇಧಿಸಲು ಕ್ರಮವಹಿಸಲಾಗಿದೆ. ಜಿಲ್ಲೆಯ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಲಾಗಿದೆ ಎಂದರು. ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೇರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net