ಬಳ್ಳಾರಿ : ಜಿಲ್ಲಾದ್ಯಂತ ದೀಪವಾಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆಗೆ ಹೂ, ಹಣ್ಣು, ಪಟಾಕಿ, ಮಣ್ಣಿನ ಹಣತೆ ಸೇರಿದಂತೆ ವಿವಿಧ ವಸ್ತುಗಳು ಖರೀದಿಸಲು ಸಾರ್ವಜನಿಕರು ಮುಗಿಬಿದ್ದರು.
ದೀಪವಾಳಿ ಹಬ್ಬದ ಹಿನ್ನೆಲೆ ಮಣ್ಣಿನ ಹಣತೆ ದೀಪಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ವಿವಿಧ ಬಣ್ಣದ ಆಕಾರಗಳಲ್ಲಿ ಅಲಂಕೃತಗೊಂಡ ಮತ್ತು ಯಾವುದೇ ಬಣ್ಣ ಬಳಸದ ಮಣ್ಣಿನಿಂದ ಮಾಡಿದ ಹಣತೆ ದೀಪಗಳನ್ನು ಖರೀದಿಸಲು ಜನರು ನಿರಂತರಾಗಿದ್ದಾರೆ. ಒಂದು ಡಜನ್ ಮಣ್ಣಿನ ಹಣತೆಗೆ 50 ರಿಂದ 100 ರೂ. ವರೆಗೆ ಬೆಲೆಯಿದೆ. ಸ್ವಲ್ಪ ದೊಡ್ಡ ಅಳತೆಯ ಮಣ್ಣಿನ ಹಣತೆಗೆ 100 ರಿಂದ 150, 200 ರೂ.ವರೆಗೂ ಮಾರಾಟ ಮಾಡಿದರು. ಇಲ್ಲಿನ ಆನಂತಪುರ ರಸ್ತೆ, ಸಿರುಗುಪ್ಪ ರಸ್ತೆ, ಸಂಗಂ ವೃತ್ತ, ಮೋತಿ ವೃತ್ತ, ಕನಕ ದುರ್ಗಮ್ಮ ವೃತ್ತ, ರಾಯಲ್ ವೃತ್ತ, ಸಣ್ಣ ಮಾರ್ಕೆಟ್, ಬೆಂಗಳೂರು ರಸ್ತೆ, ತೇರು ಬಜಾರ್, ಹೂವಿನ ಮಾರ್ಕೆಟ್ ಸೇರಿದಂತೆ ವಿವಿಧ ಕಡೆಗಳಲ್ಲಿ ದೀಪವಾಳಿ ಹಬ್ಬಕ್ಕೆ ಅಗತ್ಯ ವಸ್ತುಗಳು ಖರೀದಿ ನಡೆದಿದೆ. ಚೆಂಡು ಹೂ, ಸೇವಂತಿಗೆ ಹೂವು, ಬಾಳೆ ದಿಂಡು, ಕುಂಬಳಕಾಯಿ ಖರೀದಿಗೆ ಜನರು ಮುಂದಾಗಿದ್ದು ವಿವಿಧ ಬಣ್ಣದ ವೈವಿಧ್ಯಮಯ ಲೈಟ್ಸ್‌ಗಳು, ಹೊಸ ಬಟ್ಟೆ ಹಾಗೂ ದ್ವಿಚಕ್ರ ವಾಹನ ಖರೀದಿ ಸಹ ಭರ್ಜರಿ ನಡೆಯಿತು. ಇಲ್ಲಿನ ಐಟಿಐ ಕಾಲೇಜಿನ ಆವರಣದಲ್ಲಿ ದೀಪವಾಳಿ ಹಬ್ಬದ ಹಿನ್ನೆಲೆ 23 ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಲಕ್ಷ್ಮೀ ಪಟಾಕಿ, ಸುರ್ ಸುರ್ ಬತ್ತಿ, ರಾಕೆಟ್ ಪಟಾಕಿ ಸೇರಿದಂತೆ ವಿವಿಧ ಹಸಿರು ಪಟಾಕಿ ಖರೀದಿಗೆ ಗ್ರಾಹಕರು ಆಸಕ್ತಿ ತೋರುತ್ತಿದ್ದಾರೆ. ಒಂದು ಪಟಾಕಿ 700 ರೂ. ವರೆಗೂ ಬೆಲೆಯಿದೆ. ಪಟಾಕಿ ಕೊಂಡುಕೊಳ್ಳಲು ಮಕ್ಕಳು ಪೋಷಕರೊಂದಿಗೆ ತಂಡೋಪತಂಡಾಗಿ ಬರುತ್ತಿದ್ದ ದೃಶ್ಯಗಳು ಕಂಡುಬಂದವು.