

ಬಳ್ಳಾರಿ: ಜಿಲ್ಲೆಯಲ್ಲಿ 2023 ಏಪ್ರಿಲ್ 16ರ ಮತದಾರರ ಪಟ್ಟಿಯನ್ವಯ ಒಟ್ಟು 11,51,283 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚಿದ್ದು, 5,84,307 ಮಹಿಳಾ ಮತದಾರರು, 5,66,805 ಪುರುಷ ಮತದಾರರು ಹಾಗೂ 171 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ ಮತ್ತು ಈ ಬಾರಿ 38,866 ಯುವ ಮತದಾರರ ನೋಂದಣಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1222 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 16,845 ಜನ 80 ವರ್ಷ ಮೇಲ್ಪಟ್ಟ ಮತದಾರರು, 15,047 ಅಂಗವಿಕಲ ಮತದಾರರು ಮತ್ತು 1,406 ಜನ ವಿಐಪಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಒಟ್ಟು 43 ಫ್ಲೈಯಿಂಗ್ ಸ್ಕ್ವಾಡ್, 27 ಎಸ್‌ಎಸ್‌ಟಿ ತಂಡ ಹಾಗೂ 7 ಅಬಕಾರಿ ತಂಡಗಳು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿವೆ.
ಜಿಲ್ಲೆಯಲ್ಲಿ ಭಾನುವಾರ ಅಬಕಾರಿ ಇಲಾಖೆಯಿಂದ 10,51,046 ರೂ. ಮೌಲ್ಯದ 1789.96 ಲೀಟರ್ ಮದ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಂದ 42,891 ರೂ. ಮೌಲ್ಯದ 102.92 ಲೀಟರ್ ಮದ್ಯ ಸೇರಿ ಒಟ್ಟು 10,93,937 ರೂ. ಮೌಲ್ಯದ 1892.88 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಮತ್ತು ಇಲ್ಲಿಯವರೆಗೆ ಒಟ್ಟು 76 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಿ ನ್ಯಾಯಸಮ್ಮತ ಚುನಾವಣೆ ನಡೆಸಲು ಅನುವಾಗುವಂತೆ ಚೆಕ್‌ಪೋಸ್ಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಇದೀಗ ಜಿಲ್ಲೆಯಲ್ಲಿ ಒಟ್ಟು 27 ಚೆಕ್‌ಪೋಸ್ಟ್‌ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದ್ದು, ತೀವ್ರ ನಿಗಾ ವಹಿಸಲಾಗಿದೆ. ಎಲ್ಲ ಚೆಕ್‌ಪೋಸ್ಟ್‌ಗಳಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿ, ನಿಗಾ ವಹಿಸಲಾಗುತ್ತಿದೆ, ಅಲ್ಲದೆ ನೇರ ದೃಶ್ಯಾವಳಿ ಸೆರಿಹಿಡಿಯಲಾಗುತ್ತಿದೆ. ಮತದಾರರಿಗೆ ಆಮಿಷ ಒಡ್ಡಲು ಮತ್ತು ಅನಧಿಕೃತವಾಗಿ ವಸ್ತುಗಳನ್ನು ನೀಡುವುದು. ದಾಖಲೆಯಿಲ್ಲದ ಹಣವನ್ನು ಸಾಗಾಣೆ ಮಾಡುವುದು ಸೇರಿದಂತೆ ಆಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡದೆ ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಹದ್ದಿನ ಕಣ್ಣಿಡಲಾಗಿದೆ. ಬಳ್ಳಾರಿ ಜಿಲ್ಲೆ ಅಂತರ್ ರಾಜ್ಯ ಗಡಿ ಪ್ರದೇಶ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತೀವ್ರ ಬಿಗಿಯಾದ ಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.