

ಬಳ್ಳಾರಿ : ಸಮಾಜಕ್ಕಾಗಿ ಉತ್ತಮವಾಗಿ ಎಲ್ಲರೂ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜೀತ್ ಕುಮಾರ್ ಬಂಡಾರು ಹೇಳಿದರು.
ನಗರದ ಜಿಲ್ಲಾ ಗೃಹರಕ್ಷಕದಳದ ಕಚೇರಿ ಆವರಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೊಲೀಸರಿಗೆ ಗೃಹ ರಕ್ಷಕ ದಳ ಒಂದು ಸಹಾಯಕ ಪಡೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಭಾರತ್ ಐಕ್ಯತಾ ಯಾತ್ರೆ ಮತ್ತು ಎಸ್.ಟಿ. ಸಮಾವೇಶದಲ್ಲಿ ಗೃಹರಕ್ಷಕರು ಉತ್ತಮವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದು ಶ್ಲಾಘನೀಯ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್‌ಷಿಪ್ ಪಡೆದ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಎ.ನಟರಾಜ್ ಮಾತನಾಡಿ, ರಾಜ್ಯದಲ್ಲಿ ಬಳ್ಳಾರಿ ಗೃಹ ರಕ್ಷಕ ದಳ ಒಂದು ಮಾದರಿ ಜಿಲ್ಲೆಯಾಗಿದೆ. ಜಿಲ್ಲೆಯ ಗೃಹರಕ್ಷಕರು ತಮ್ಮ ಕರ್ತವ್ಯ ನಿಷ್ಠೆ, ಸಮಯ ಪಾಲನೆ ಮತ್ತು ಜಿಲ್ಲಾ ಮಟ್ಟದಲ್ಲಿ, ವಲಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ವೃತ್ತಿಪರ ಕ್ರೀಡಾಕೂಟದಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡಿ ರಾಜ್ಯದಲ್ಲಿ ಚಾಂಪಿಯನ್‌ಷಿಪ್ ಪಡೆದು ಜಿಲ್ಲೆಗೆ ಕೀರ್ತಿ ತಂದಿರುವುದು ಸಂತಸದ ಸಂಗತಿ ಎಂದರು.
ರೂಪಿಂದರ್ ಕೌರ್, ಎಂ.ಎ.ಶಕೀಬ್, ಬಿ.ಎಸ್.ಕಾಂಬಳೆ, ಬಸವರಾಜ್ ಹಗಳಗಾರ, ಎಸ್.ಎಂ.ಗಿರಿಶ್, ವಾಲ್ಯನಾಯ್ಕ, ಎಂ.ಎಂ.ಹಳ್ಳಿ, ಬಿ.ಕೆ.ಬಸವಲಿಂಗ, ಎನ್.ಎಸ್.ಲಕ್ಷ್ಮೀನರಸಿಂಹ ಹಾಗೂ 100ಕ್ಕಿಂತ ಹೆಚ್ಚು ಗೃಹರಕ್ಷಕರು ಮತ್ತು ಪೌರರಕ್ಷಣಾ ಸದಸ್ಯರು ಉಪಸ್ಥಿತರಿದ್ದರು.