

ಬಳ್ಳಾರಿ: ಸುರಕ್ಷಿತ ಪ್ರಯಾಣ, ಜೀವ ರಕ್ಷಣೆಗೆ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚರಿಸಬೇಕು ಎಂದು ಎಸ್ಪಿ ಸೈದುಲು ಅದಾವತ್ ಹೇಳಿದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ನಗರದ ಎಸ್ಪಿ ಕಚೇರಿ ಅವರಣದಲ್ಲಿ ಸೋಮವಾರ ಗೃಹರಕ್ಷಕದಳ ಹಮ್ಮಿಕೊಂಡ ಹೆಲ್ಮೆಟ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಮೊದಲು ನಾವು ಸಂಚಾರಿ ನಿಯಮಗಳನ್ನು ಪಾಲಿಸುವುದರ ಜತೆಗೆ ಸಾರ್ವಜನಿಕರಿಗೆ ಹೆಲ್ಮೆಟ್ ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ ಕಳೆದ ವರ್ಷ 1009 ರಸ್ತೆ ಅಪಘಾತಗಳು ನಡೆದಿದ್ದು, ಬೈಕ್ ಅಪಘಾತದಲ್ಲಿ 345 ಜನ ಮಿದುಳಿಗೆ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ. ಇದರಲ್ಲಿ ಶೇ.50 ಜನ 25 ರಿಂದ 40 ವರ್ಷದೊಳಗಿನವರೇ ಹೆಚ್ಚು ಎಂದರು.
ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಹೆಲ್ಮೆಟ್ ಧರಿಸದ ಸವಾರರ ವಿರುದ್ಧ 56,000 ಪ್ರಕರಣ ದಾಖಲಿಸಿ 2.4 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತು ಪ್ರತಿ ವಾರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಇದಕ್ಕೂ ಮುನ್ನ ಗೃಹ ರಕ್ಷಕದಳ ಸಿಬ್ಬಂದಿಗೆ ಹೆಲ್ಮೆಟ್ ವಿತರಿಸಿದರು. ನಗರದ ವಿವಿಧ ವೃತ್ತ, ರಸ್ತೆಗಳಿಗೆ ತೆರಳಿ ಬೈಕ್ ಸವಾರರಿಗೆ ಜಾಗೃತಿ ಮೂಡಿಸಲಾಯಿತು. ಗೃಹರಕ್ಷಕದಳದ ಸಮಾದೇಷ್ಟ ಎಂ.ಎ.ಷಕೀಬ್, ಅರ್‌ಟಿಒ ಅಧಿಕಾರಿ ಶೇಖರ್, ಟ್ರಾಫಿಕ್ ಪಿಎಸ್‌ಐ ಮರಿಯಾ ಇತರರಿದ್ದರು.