ಬಳ್ಳಾರಿ ಇತಿಹಾಸ ಅರಿಯದೆ ಜಿಲ್ಲೆ ವಿಭಜನೆ; ಮುಖ್ಯಮಂತ್ರಿ ವಿರುದ್ಧ ವಾಟಾಳ್ ನಾಗರಾಜ ಆಕ್ರೋಶ

23112020 Bellary Vatal Nagaraj Protest
Published on

ಬಳ್ಳಾರಿ: ಜಿಲ್ಲೆ ವಿಭಜನೆ ಮಾಡುವುದು ಇತಿಹಾಸಕ್ಕೆ ಅಪಚಾರ ಎಸಗಿದಂತೆ. ಬಳ್ಳಾರಿ ಇತಿಹಾಸ ತಿಳಿಯದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆ ವಿಭಜನೆಗೆ ಮುಂದಾಗಿದ್ದಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಅಖಂಡ ಜಿಲ್ಲಾ ಹೋರಾಟ ಸಮಿತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು ಮಾತನಾಡಿ, ಯಾರದೋ ಓಲೈಕೆಗಾಗಿ ಜಿಲ್ಲೆ ವಿಭಜನೆ ಸರಿಯಲ್ಲ ಎಂದು ಹೇಳಿದರು. ನಗರದ ನಗರೂರು ನಾರಾಯಣ ರಾವ್ ಪಾರ್ಕ್‌ನಿಂದ ಪ್ರತಿಭಟನಾ ರ‌್ಯಾಲಿ ನಡೆಯಿತು. ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದ ವಾಟಾಳ್ ನಾಗರಾಜ್‌ರನ್ನು ಪೊಲೀಸರು ವಶಕ್ಕೆ ಪಡೆದರು.

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಎಸ್.ಪನ್ನರಾಜ, ತುಂಗಭದ್ರಾ ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು, ಜಿಪಂ ಸದಸ್ಯ ಮುಂಡ್ರಿಗಿ ನಾಗರಾಜ, ವಿವಿಧ ಸಂಘಟನೆಗಳ ಮುಖಂಡರಾದ ಕುಡತಿನಿ ಶ್ರೀನಿವಾಸ, ಎರ‌್ರಿಸ್ವಾಮಿ, ಸಿದ್ಮಲ್ ಮಂಜುನಾಥ, ಕಪ್ಪಗಲ್ಲು ಚಂದ್ರಶೇಖರ ಆಚಾರ್, ಬಿಸಿಲಹಳ್ಳಿ ಬಸವರಾಜ, ಸಿಂಗಾಪುರ ನಾಗರಾಜ, ಸಂಗನಕಲ್ಲು ಕೃಷ್ಣ, ಮೋಹನ್‌ಬಾಬು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net