ಬಳ್ಳಾರಿ ಜಿಲ್ಲೆಗೆ ಕಂಪ್ಲಿ ತಾಲೂಕು ಸೇರ್ಪಡೆ ಬೇಡ: ಕಂದಾಯ ಇಲಾಖೆ ಅಪರ ಕಾರ್ಯದರ್ಶಿಗೆ ಆಕ್ಷೇಪಣೆ ಸಲ್ಲಿಕೆ

090121 Kampli Taluku Leaders Appeal
ಬೆಂಗಳೂರಿನ ಅಪರ ಕಾರ್ಯದರ್ಶಿಗಳ ಕಚೇರಿ ಅಧಿಕಾರಿಗೆ ಕಂಪ್ಲಿ ತಾಲೂಕು ಸಂಘಟನೆಗಳ ಮುಖಂಡರು ಶುಕ್ರವಾರ ಆಕ್ಷೇಪಣೆ ಸಲ್ಲಿಸಿದರು.
Published on

ಕಂಪ್ಲಿ: ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕು ಸೇರಿಸದೆ ಬಳ್ಳಾರಿ ಜಿಲ್ಲೆಯಲ್ಲಿ ಉಳಿಸಿದ್ದನ್ನು ಖಂಡಿಸಿ ಇಲ್ಲಿನ ನೂತನ ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕು ಸೇರ್ಪಡೆ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಬೆಂಗಳೂರಿನ ಕಂದಾಯ ಇಲಾಖೆ ಅಪರ ಕಾರ್ಯದರ್ಶಿಗಳ ಕಚೇರಿ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಿದರು.

ಮುಖಂಡ ಇಟಗಿ ಬಸವರಾಜಗೌಡ ಮಾತನಾಡಿ, ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಒತ್ತಾಯಿಸಿ ಶಾಸಕ ಜೆ.ಎನ್.ಗಣೇಶ್, ತಾಪಂ ಸದಸ್ಯರು ಸ್ವೀಕರಿಸಿದ ಠರಾವು ಪ್ರತಿ, ಪುರಸಭೆಯ 23 ಸದಸ್ಯರ ಆಕ್ಷೇಪಣಾ ಪತ್ರ ಸೇರಿ ಒಟ್ಟು 22 ಸಂಘಟನೆಗಳು ನೀಡಿದ ಆಕ್ಷೇಪಣಾ ಪತ್ರಗಳನ್ನು ಸಲ್ಲಿಸಲಾಗಿದೆ ಎಂದರು. ಮುಖಂಡರಾದ ಇಟಗಿ ಬಸವರಾಜಗೌಡ, ಕರೇಕಲ್ ಮನೋಹರ, ಸೈಯದ್ ಉಸ್ಮಾನ್, ಬಿ.ಜಾಫರ್, ಮಣ್ಣೂರು ನಾಗರಾಜ ಇತರರಿದ್ದರು.

ವಿಜಯನಗರಕ್ಕೆ ಸೇರಲಿ: ನೂತನ ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕು ಸೇರಿಸಬೇಕು ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಣ್ಣೂರು ನಾಗರಾಜ ಒತ್ತಾಯಿಸಿದ್ದಾರೆ. ಬೆಂಗಳೂರಿನ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಕಚೇರಿ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದರು. ನೂತನ ವಿಜಯನಗರ ಜಿಲ್ಲೆ ರಚನೆಗೆ ಈ ಹಿಂದೆ ಕಂಪ್ಲಿ ತಾಲೂಕಿನ ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು ಹೋರಾಟ ನಡೆಸಿದ್ದರು.

ಹೊಸ ಜಿಲ್ಲೆಗೆ ಕಂಪ್ಲಿ ತಾಲೂಕು ಸೇರುವ ಎಲ್ಲ ಅರ್ಹತೆ ಹೊಂದಿದ್ದರೂ ಏಕಾಏಕಿ ಬಳ್ಳಾರಿ ಜಿಲ್ಲೆಯಲ್ಲಿಯೇ ಉಳಿಸಿರುವುದು ಖಂಡನೀಯ. ಕಂಪ್ಲಿ ತಾಲೂಕಿನ ಜನರ ಹಿತದೃಷ್ಟಿಯಿಂದ ವಿಜಯನಗರ ಜಿಲ್ಲೆಗೆ ಸೇರಿಸಬೇಕು. ತಪ್ಪಿದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net