ಬಳ್ಳಾರಿ : ಜಿಲ್ಲಾಸತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮೂವರು ಬಾಣಂತಿಯರ ಮೃತಪಟ್ಟು ವಾರ ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ಖಾನ್ ಭೇಟಿ ನೀಡದೆ ಇರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ಕಳೆದ ವಾರ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಒಳಪಟ್ಟ ನಂತರ ಇಬ್ಬರು ಬಾಣಂತಿಯರು ಜಿಲ್ಲಾಸ್ಪತ್ರೆ ಹಾಗೂ ಒಬ್ಬರು ಬಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ. ಇನ್ನೂ ನಾಲ್ವರು ಬಾಣಂತಿಯರು ಬಿಮ್ಸ್‌ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರ ಮೃತಪಟ್ಟ ಬಾಣಂತಿಯರು ಜನಿಸಿದ ಶಿಶುಗಳು ಆರೋಗ್ಯವಾಗಿದ್ದು ಮಕ್ಕಳ ನಿರ್ವಹಣೆ ಹೇಗೆ ಎಂಬುದು ಮೃತ ಬಾಣಂತಿಯರ ಗಂಡಂದಿರ ಹಾಗೂ ಪೋಷಕರ ಚಿಂತೆಯಾಗಿದೆ. ಸರ್ಕಾರ ಬಾಣಂತಿಯರ ಸಾವಿನ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜೀವ್ ಗಾಂಧಿ ಆರೋಗ್ಯ ವಿವಿ ಉಪಕುಲಪತಿ ತಂಡ ರಚಿಸಲಾಗಿದೆ. ಮೂವರ ಬಾಣಂತಿಯರ ಸರಣಿ ಸಾವು ಪ್ರಕರಣ ರಾಜ್ಯದಲ್ಲಿ ತಲ್ಲಣ ಉಂಟು ಮಾಡಿದೆ. ಆದರೆ, ಈವರೆಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಒಂದು ಬಾರಿಯೂ ಭೇಟಿ ನೀಡದೆ ಡಿಸಿ ಮೂಲಕ ಮಾಹಿತಿ ಪಡೆದುಕೊಂಡಿದ್ದು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಪ್ತ ಕಾರ್ಯದರ್ಶಿ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿ ಬೇಜವ್ದಾರಿ ತೋರಿದ್ದಾರೆ.
ಉಪ ಚುನಾವಣೆಯಲ್ಲಿ ಪ್ರಚಾರ : ಇತ್ತೀಚೆಗೆ ಕಳೆದ ವಾರವೇ ವಿಧಾನಸಭಾ ಉಪಚುನಾವಣೆಯಲ್ಲಿ ಜಮೀರ್ ಸಮುದಾಯದ ಮತ ಸೆಳೆಯಲು ಸಂಡೂರಿಗೆ ನಾಲ್ಕೈದು ಬಾರಿ ಭೇಟಿ ನೀಡಿ ಅಬ್ಬರದ ಪ್ರಚಾರ ನಡೆಸಿದರು. ಆದರೆ, ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವುಗಳು ನಡೆದಿದ್ದರೂ ಕೂಡ ಔಪಚಾರಿಕವಾಗಿಯೂ ಕುಟುಂಬದವರಿಗೆ ಸಾಂತ್ವನ ಹೇಳಲು ಕೂಡ ಸಮಯವಿಲ್ಲ. ಕೇವಲ ಚುನಾವಣೆ ವೇಳೆ ಮಾತ್ರ ಜಿಲ್ಲೆಯ ಜನರು ನೆನಪು ಆಗುವುದು. ವಿಜಯನಗರ ಹಾಗೂ ಬಳ್ಳಾರಿಗೆ ಎರಡು ಜಿಲ್ಲೆಗೆ ಉಸ್ತುವಾರಿ ವಹಿಸಿಕೊಂಡ ಬಳಿಕ ಹೆಚ್ಚಾಗಿ ಜಿಲ್ಲೆಯಲ್ಲಿ ಕಾಣುಸುತ್ತಿಲ್ಲ. ಕೇವಲ ಎರಡ್ಮೂರು ಸಭೆ ಕಾಟಚಾರಕ್ಕೆ ನಡೆಸಿದ್ದು ಬಿಟ್ಟರೆ ಅಧಿಕಾರಿಗಳಿಗೆ ಕಿವಿ ಹಿಂಡುವ ಕೆಲಸ ಮಾಡಿಲ್ಲ. ಜಮೀರ್‌ಗೆ ಈ ಪ್ರಕರಣದ ಬಗ್ಗೆ ಮಾಹಿತಿಯಿದ್ದರೂ ಮಹಾರಾಷ್ಟ್ರ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ಜನಪ್ರತಿನಿಧಿಗಳಿಂದ ಬಡವರಿಗೆ ನ್ಯಾಯ ಸಿಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಘಟನೆ ಬಳಿಕ ನಗರ ಶಾಸಕ ನಾರಾ ಭರತರೆಡ್ಡಿ, ಸಂಸದ ಈ.ತುಕಾರಾಮ್ ಬಿಮ್ಸ್‌ಗೆ ಭೇಟಿ ನೀಡಿ ಅಧಿಕಾರಿಗಳಿಗೆ ಜತೆ ಚರ್ಚಿಸಿದ್ದಾರೆ. ಆದರೆ, ಯಾವ ಜನಪ್ರತಿನಿಧಿ ಕೂಡ ಮೃತ ಕುಟುಂಬಗಳಿಗೆ ಪರಿಹಾರದ ಘೋಷಣೆ ಮಾಡಿಲ್ಲ.ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವರು ಕೂಡ ಈವರೆಗೂ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಾರೆ ವೈದ್ಯರ ನಿರ್ಲಕ್ಷೃತನದಿಂದ ಮೂವರು ಬಾಣಂತಿಯರು ಮೃತಪಟ್ಟರೆ, ಮೂರು ಶಿಶುಗಳ ಕಣ್ಣು ಬಿಡುವ ಮುನ್ನವೇ ತಾಯಿಂದಿರ ಕಳೆದುಕೊಂಡಿರುವ ಘಟನೆ ಕುರುಳು ಚುಚ್ಚುವಂತೆ ಮಾಡಿದೆ.
ಇಂತಹ ಘಟನೆ ಹೊಸದೇನಲ್ಲ : 2017ರಲ್ಲಿ ಬಿಮ್ಸ್ ಅಪರೇಷನ್ ಥೇಟರ್ ಮೇಲ್ಛಾವಣೆ ಕುಸಿತವಾಗಿತ್ತು. 2020ರ ಕೋವಿಡ್‌ನಲ್ಲಿ ಶವಗಾರದ ಕೋಲ್ಡ್ ಸ್ಟೋರೇಜ್ ದುರಸ್ತಿ ಮಾಡದ ಪರಿಣಾಮ ಶವಗಳು ಕೊಳೆತ್ತಿದ್ದವು. ಅಲ್ಲದೆ, ಮಕ್ಕಳ ಅದಲು ಬದಲು ಪ್ರಕರಣ, ಎರಡು ವರ್ಷದ ಹಿಂದೆ ಐಸಿಯುನಲ್ಲಿ ವಿದ್ಯುತ್ ಸ್ಥಗಿತಗೊಂಡು ಮೂವರು ಮೃತಪಟ್ಟಿದ್ದರು. ಈ ಎಲ್ಲ ಘಟನೆಗಳಿಗೆ ಸರ್ಕಾರ ತನಿಖೆ ತಂಡ ರಚಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡುತ್ತಾರೆ. ಆದರೆ, ಈವರೆಗೂ ಯಾವುದಾದರೂ ಒಂದು ಪ್ರಕರಣಕ್ಕೆ ಒಬ್ಬರು ಶಿಕ್ಷೆಗೆ ಒಳಪಡಿಸಿದ್ದಾರೆ ಎಂಬ ದಾಖಲೆಯಿಲ್ಲ. ಯಾವ ಪಕ್ಷದ ಸರ್ಕಾರಗಳು ಕೂಡ ಮಾರ್ಯದೆ ಹೋಗುತ್ತೆ ಎಂಬ ವಿಚಾರದಿಂದ ತನಿಖೆ ನಡೆಸಿ ವರದಿಯನ್ನು ಮುಚ್ಚಿ ಹಾಕುತ್ತಾರೆ. ಸದ್ಯ, ಬಾಣಂತಿಯರ ಪ್ರಕರಣವು ಕೂಡ ತನಿಖೆ ನಡೆದಿದ್ದು ಯಾರು ಶಿಕ್ಷೆಗೆ ಒಳಗಾಗುತ್ತಾರೆ ಎಂಬುದು ಕಾದು ನೋಡಬೇಕಿದೆ. ಅಲ್ಲದೆ, ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ನಡೆಯುತಿದ್ದು ಈವರೆಗೂ ಪೂರ್ಣಗೊಂಡಿಲ್ಲ. ನಗರದ ಟ್ರಾಮ್ ಕೇರ್ ಸೆಂಟರ್‌ನಲ್ಲಿ ನಿಗದಿತ ಸಮಯಕ್ಕೆ ವೈದ್ಯರು ಬಾರದೆ ರೋಗಿಗಳು ಸಂಕಷ್ಟ ಪಡುವಂತೆಯಾಗಿದೆ. ಪ್ರಮುಖವಾಗಿ ಸರ್ಕಾರಿ ವೈದ್ಯರು ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಜೆ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರೇ ಇರುವುದಿಲ್ಲ ಎಂಬ ಆರೋಪ ಬಲವಾಗಿದೆ. ಬಿಮ್ಸ್, ಜಿಲ್ಲಾಸ್ಪತ್ರೆ ಹಾಗೂ ಟ್ರಾಮ್ ಕೇರ್ ಸೆಂಟರ್ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.
ಬಾಕ್ಸ್ : ಕಳೆದ ಮೂರು ವರ್ಷದಲ್ಲಿ ರಾಜ್ಯಾದ್ಯಂತ ಹೆರಿಗೆ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೇ 2079 ಬಾಣಂತಿಯರು ಮರಣ ಹೊಂದಿದ್ದಾರೆ. ಇದರಲ್ಲಿ 822 ಜನ ಹೆರಿಗೆ ಸಂದರ್ಭದಲ್ಲಿಯೇ ಮೃತಪಟ್ಟಿದ್ದಾರೆ ಎಂಬುದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಈ ಬಾಣಂತಿಯರ ಪ್ರಕರಣದ ಬಗ್ಗೆ ಮಾಹಿತಿಗೆ ಬಿಮ್ಸ್ ನಿರ್ದೇಶಕ ಡಾ.ಟಿ. ಗಂಗಾಧರಗೌಡ ಹಾಗೂ ಜಿಲ್ಲಾಸ್ಪತ್ರೆ ಸರ್ಜನ್ ಡಾ.ಬಸರೆಡ್ಡಿ ಅವರನ್ನು ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ.