ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿ ಕೊಡಿ

Published on

ಬಳ್ಳಾರಿ : ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳ ಹಿಂದ ವಿವಿಧ ಸಮಸ್ಯೆಗಳಿಂದ ಸಾರ್ವಜನಿಕರು ಸಂಕಷ್ಟ ಪಡುತ್ತಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು‌ ಮಾತ್ರ ಇದಕ್ಕೆ ಸಂಬಂಧವಿಲ್ಲ ಎಂಬಂತೆ ಜಿಲ್ಲೆಗೆ ಭೇಟಿ ನೀಡದ ಇರುವುದು ಆಶ್ಚರ್ಯಕರ ‌ಮೂಡಿಸಿದೆ.

ಮಾಜಿ ಸಚಿವ ಬಿ.ನಾಗೇಂದ್ರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಮೀರ್ ಅಹ್ಮದ್ ಖಾನ್ ಅವರನ್ನು ನೇಮಿಸಲಾಯಿತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ, ಜನತ ದರ್ಶನ ಹಾಗೂ ಕಂಪ್ಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಬಿಟ್ಟರೆ ಉಳಿದ ಬೇರೆ ಎಲ್ಲಿಯೂ ಭೇಟಿ ನೀಡಿಲ್ಲ. ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್‌ನಲ್ಲಿ ಐವರು ಬಾಣಂತಿಯರ ಮೃತಪಟ್ಟರೂ ಕೂಡ ಕೇವಲ ಅಪ್ತ ಕಾರ್ಯದರ್ಶಿ ಮೂಲಕ ಡಿಸಿಯಿಂದ ಮಾಹಿತಿ ತರಿಸಿಕೊಳ್ಳುವುದು ಬಿಟ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಲಿಲ್ಲ. ಅಲ್ಲದೆ, ಮೃತರ ಕುಟುಂಬಗಳಿಗೆ ಸ್ವಾಂತನವೂ ಕೂಡ ಹೇಳಲಿಲ್ಲ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಕಿವಿ ಹಿಂಡುವ ಕೆಲಸ ಮಾಡಿದರು. ಮುತಾವರ್ಜಿ ವಹಿಸಿಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ನಮಗೆ ಏನು ಸಂಬಂಧವಿಲ್ಲ ಎಂಬಂತೆ ಇರುವುದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ. ಕಳೆದ ಕೆಡಿಪಿ ಸಭೆಯಲ್ಲಿ ಬಿಮ್ಸ್ ‌ಹಾಗೂ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ತನದಿಂದ ಬಡವರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ ಎಂಬುದಾಗಿ ಶಾಸಕ ನಾರಾ ಭರತರೆಡ್ಡಿ ತಿಳಿಸಿದ್ದರು. ಇದಕ್ಕೆ, ಬಿಮ್ಸ್ ಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂಬುದಾಗಿ ಜಮೀರ್ ಹೇಳಿಕೆ ನೀಡಿದ್ದರು. ಆದರೆ, ಐವರು ಬಾಣಂತಿಯರು ಮೃತಪಟ್ಟರು ಅನೀರಿಕ್ಷತ ಅಲ್ಲ ಸೌಜನ್ಯಕ್ಕೆ ಆದರೂ ಭೇಟಿ‌ ನೀಡಿ ಪರಿಶೀಲಿಸಿಲ್ಲ.

ಅಧಿಕಾರಿಗಳ : ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಹಾಗೂ ಫೆಂಗಾಲ್ ಚಂಡಮಾರುತದ ಪರಿಣಾಮದಿಂದ ಜಿಲ್ಲೆಯಲ್ಲಿನ‌ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತ ನೆಲಕ್ಕೆ ಉರುಳಿದ ಪರಿಣಾಮ ರೈತ ಸಂಘಟನೆಗಳು ಪ್ರತಿಭಟಿಸಿ ಪರಿಹಾರ ನೀಡುವಂತೆ ಒತ್ತಾಯಿಸಿದರೂ ಕೂಡ ಸಚಿವರು ಪರಿಹಾರದ ಬಗ್ಗೆ ಚಕಾರ ಎತ್ತಿಲ್ಲ. ಅಲ್ಲದೆ, ನೂರರು ಹೆಕ್ಟೇರ್ ಪ್ರದೇಶದ ಮೆಣಸಿನಕಾಯಿ ‌ಬೆಳೆಗೆ ಟ್ರಿಪ್ಸ್ ಹಾಗೂ ಕೀಟಭಾಧೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಕಷ್ಟ ನಿವಾರಿಸಬೇಕಿದ್ದ ಸಚಿವರು ಮಾತ್ರ ಪತ್ತೆ ಇಲ್ಲ. ಇಲ್ಲಿನ ಕನಕ ದುರ್ಗಮ್ಮ ಕೆಳ ಸೇತುವೆ, ಸುಧಾ ಕ್ರಾಸ್ ಮೇಲ ಸೇತುವೆ ದುರಸ್ತಿ ಕಾರ್ಯದಿಂದ ವಾಹನ ಸವಾರರು ನಗರದಲ್ಲಿ ಸಂಚಾರಿಸಲು ಪರದಾಡುತ್ತಿದ್ದಾರೆ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲನೆ ಹಾಗೂ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸುತ್ತಿಲ್ಲ ಎಂಬುದು ವಾಹನ ಸವಾರರ ಅಭಿಪ್ರಾಯವಾಗಿದೆ.

ಚುನಾವಣೆಯಲ್ಲಿ ಪ್ರಚಾರ : ಕಳೆದ ತಿಂಗಳು ನಡೆದ ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಕ್ಷೇತ್ರದ ವಿವಿಧಡೆ ಪ್ರಚಾರ ನಡೆಸಿ ಸಮುದಾಯದ ‌ಮತ ಸೆಳೆಯಲು ಮುಂಚೂಣಿಯಲ್ಲಿದ್ದರು. ಅಭ್ಯರ್ಥಿ ಗೆಲುವಿಗೆ ಬೆವರು ಹರಿಸಿದ ಸಚಿವರಿಗೆ ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಆಲಿಸಲು ಮಾತ್ರ ಸಮಯವಿಲ್ಲ. ಅವಳಿ ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿರುವ ಜಮೀರ್ ವಿಜಯನಗರದಲ್ಲಿಯೂ ಅಷ್ಟೋಂದು ಪರಿಣಾಮಕಾರಿ ಕಾರ್ಯಗಳು ಕೈಗೊಂಡಿಲ್ಲ. ಹೊಸ ಜಿಲ್ಲೆಯಲ್ಲಿ ವಿವಿಧ ‌ಕಟ್ಟಡಗಳಲ್ಲಿದೆ ಸರ್ಕಾರಿ ನೌಕರರು ಕೆಲಸ ಮಾಡಲು ಪರಾಡುತ್ತಿದ್ದಾರೆ. ಇವುಗಳಿಗೆ‌ ಸಮಸ್ಯೆಗಳಿಗೆ‌ ಪರಿಹಾರ ಕಂಡುಕೊಳ್ಳಬೇಕಿದ್ದ ಸಚಿವರು ಬೆಂಗಳೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಆರೋಪ ಸರ್ಕಾರಿ ಅಧಿಕಾರಿಗಳಿಂದ ಕೇಳಿ ಬಂದಿದೆ. ಸ್ಥಳೀಯ ಶಾಸಕರಿಗೂ ಬಿಟ್ಟು ಹೊರಗಿನ ಜಿಲ್ಲೆಯವರೆಗೆ ಎರಡು ಜಿಲ್ಲೆಗಳ ಉಸ್ತುವಾರಿ ನೀಡಿದರೆ ಸಚಿವರ ಕಣ್ಣಿಗೆ ಸಮಸ್ಯೆಗಳು ಕಾಣದು.

ಕೋಟ್...

ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಡವರ ಸಾವಿನ ಬಗ್ಗೆ ಅರಿವು ಇಲ್ಲ. ರಾಜ್ಯವೇ ಬೆಚ್ಚಿ ಬೀಳುವ ಅಂತಹ ಘಟನೆ ನಡೆದರೂ ‌ಕೂಡ ಈವರೆಗೂ ಭೇಟಿ ನೀಡಿಲ್ಲ. ಜಮೀರ್ ಟೈಂ ಪಾಸ್ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಕಷ್ಟಗಳು ಅವರಿಗೆ ಬಂದರೆ ಬೇರೋಬ್ಬರ ನೋವು ಅರ್ಥವಾಗಲಿದೆ. ಈ ಘಟನೆಯನ್ನು ಬಿಜೆಪಿ ಖಂಡಿಸಿದೆ.

_ ಬಿ. ಶ್ರೀರಾಮುಲು, ಮಾಜಿ ಸಚಿವ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net