ಬಳ್ಳಾರಿ : ನೆರೆಯ ಆಂಧ್ರ ಹಾಗೂ ಜಿಲ್ಲೆಯ ಜನರಿಗೆ ಚಿಕಿತ್ಸೆಗೆ ಮತ್ತು ಹೆರಿಗೆಗೆ ಹೆಸರುವಾಗಿಯಾಗಿದ್ದ ಇಲ್ಲಿನ ಜಿಲ್ಲಾಸ್ಪತ್ರೆಯು ಸದ್ಯ ಬಾಣಂತಿಯರ ಸರಣಿ ಸಾವಿನಿಂದ ವಿವಾದದಲ್ಲಿ ಸಿಲುಕಿದೆ. ಈ ಆಸ್ಪತ್ರೆಯಲ್ಲಿಯೇ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಸ್. ನಕುಲ್ ಪತ್ನಿ , ಜಿಪಂ ಸಿಇಒ ನಂದಿನಿ ಸೇರಿದಂತೆ ಐಪಿಎಸ್, ನ್ಯಾಯಾಧೀಶರ ಪತ್ನಿಯರು ಇಲ್ಲಿಯೇ ಸಾಮಾನ್ಯ ಹಾಗೂ ಶಸ್ತ್ರಚಿಕಿತ್ಸೆ ಹೆರಿಗೆಗೆ ಒಳಪಡುವ ಈ ಆಸ್ಪತ್ರೆ ಮೂಲಕ ಹೆಗ್ಗಳಿಕೆ ಪಡೆದಿತ್ತು. ಆದರೆ, ಸದ್ಯ ಜಿಲ್ಲೆಯ ಬಾಣಂತಿಯರ ಸಾವಿನಿಂದ ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆಗೆ ತೆರಳಲು ರೋಗಿಗಳು ಹಾಗೂ ಗರ್ಭಿಣಿಯರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಈ ಆಸ್ಪತ್ರೆಯಲ್ಲಿ ಮೊದಲ ಹೆರಿಗೆಯಾದವರು ಎರಡನೇ ಹೆರಿಗೆಗೆ ದಾಖಲಿಸಲು ಕುಟುಂಬಸ್ಥರು ಭಯ ಪಡುತ್ತಿದ್ದಾರೆ. ಆದ್ದರಿಂದ, ಲಕ್ಷಾಂತರ ರೂ. ವ್ಯಯಿಸಿ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ. ಕೆಲ ತಿಂಗಳ ಹಿಂದ ಖಾಸಗಿ ಆಸ್ಪತ್ರೆಯ ಚಿಕಿತ್ಸೆಗೆ ಆಸಕ್ತಿ ತೊರೆದು ಸರ್ಕಾರಿ ಆಸ್ಪತ್ರೆಗಳತ್ತ ಒಲವು ತೋರುತ್ತಿದ್ದ ಜನರಿಗೆ ಈ ಸರಣಿ ಸಾವು ಅತಂಕ ಮೂಡಿಸಿದೆ. ಅಲ್ಲದೆ, ಪ್ರತಿ ತಿಂಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಕೈಗೊಳ್ಳುತ್ತಿದ್ದ ಗರ್ಭಿಣಿಯರು ಕೂಡ ನಗರದ ಪ್ರತಿಷ್ಠಿತ ಖಾಸಗಿ ವೈದ್ಯರ ಬಳಿ ಪ್ರತಿ ತಿಂಗಳ ತಪಾಸಣೆ ಕೈಗೊಳ್ಳುತ್ತಿದ್ದಾರೆ. ತ್ವರಿತಗತಿಯಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ತಪ್ಪಿಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಿ ಆಸ್ಪತ್ರೆಗಳತ್ತ ಸೆಳೆಯಬೇಕಿದೆ.
ಅನುಮಾನದ ಹುತ್ತ : ಜಿಲ್ಲೆಯ ಐವರ ಬಾಣಂತಿಯರ ಸಾವಿಗೆ ಸರ್ಕಾರಿ ಔಷಧಾಲಯದಿಂದ ಪೂರೈಕೆಯಾದ ದೋಷಪೂರಿತ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಎಂಬ ಕಾರಣದಿಂದ ವರದಿ ನೀಡಿದೆ. ಆದರೆ, ದೋಷಪೂರಿತ ಐವಿ ದ್ರಾವಣವೇ ಕಳೆದ ಕೆಲ ದಿನಗಳಿಂದ ಸಾಮಾನ್ಯ ಹಾಗೂ ಶಸ್ತ್ರಚಿಕಿತ್ಸೆಗೆ ಒಳಪಡುವ ಬಾಣಂತಿಯರ ಹಾಕಲಾಗಿದೆ. ನ. 11ರಂದು ಸಿಸೇರಿಯನ್ ಗೆ ಒಳಪಟ್ಟ ಬಾಣಂತಿಯರಿಗೆ ಮಾತ್ರ ರಿಯಾಕ್ಷನ್ ಆಗಿದೆ. ಇದು ಕೇವಲ ಐವಿ ದ್ರಾವಣದಲ್ಲಿ ದೋಷಪೂರಿತ ಅಲ್ಲ , ಶಸ್ತ್ರಚಿಕಿತ್ಸೆಯಲ್ಲಿ ಕೆಲ ದೋಷವಾಗಿದೆ ಎಂಬುದು ಮೃತ ಕುಟುಂಬಸ್ಥರ ಅನುಮಾನವಾಗಿದೆ.
ಬಿಮ್ಸ್ ಬಗ್ಗೆ ಟೀಕೆ : ಬಿಜೆಪಿಯ ಅಧಿಕಾರವಧಿಯಲ್ಲಿ 2022 ಸೆ. 15 ರಂದು ಜಿಲ್ಲೆಯ ಬಿಮ್ಸ್‌ನಲ್ಲಿ ವಿದ್ಯುತ್ ಕಡಿತಗೊಂಡು ಐಸಿಯುನಲ್ಲಿದ್ದ ಮೂವರು ರೋಗಿಗಳು ಮೃತಪಟ್ಟಿದ್ದರು. ಮೂವರ ರೋಗಿಗಳ ಸಾವಿಗೆ ಕಾರಣ ಬಿಜೆಪಿ ಸರ್ಕಾರ ಕಾರಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಸಿದ್ದರಾಮಯ್ಯ ಸದನದಲ್ಲಿ ಪ್ರಸ್ತಾಪಿಸಿ ಮೃತ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು. ಅಲ್ಲದೆ, ಈವರೆಗೂ ಆರೋಗ್ಯ ಸಚಿವರು ಭೇಟಿ ನೀಡಿಲ್ಲ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು. ಆದರೆ, ಈಗ ಇವರ ಸರ್ಕಾರದಲ್ಲಿಯೇ ಐವರು ಬಾಣಂತಿಯರು ಮೃತಪಟ್ಟಿದ್ದರಿಂದ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಮುಜುಗರಕ್ಕೆ ಈಡಾಗಬಹುದು ಎಂಬ ಉದ್ದೇಶದಿಂದ ಭೇಟಿಗೆ ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಆರೋಗ್ಯ ಸಚಿವರೇ ಮೃತ ಕುಟಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಸೌಜನ್ಯಕ್ಕೆ ಆದರೂ ಈವರೆಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿಲ್ಲ.
ಕೋಟ್....
ಜಿಲ್ಲೆಯ ಬಾಣಂತಿಯರ ಸಾವಿನ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆದಿದ್ದು. ಜಿಲ್ಲಾಸ್ಪತ್ರೆ ಗೆ ಜನರನ್ನು ಸೆಳೆಯಲು ಮುಂದಾಗಲಾಗವುದು.
_ ಡಾ.ವೈ.ರಮೇಶ ಬಾಬು, ಡಿಎಚ್ಒ, ಬಳ್ಳಾರಿ