

ಬಳ್ಳಾರಿ: 18 ವರ್ಷ ತುಂಬಿದ ಎಲ್ಲ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಹೇಳಿದರು.
ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮತದಾನ ಪ್ರತಿಯೊಬ್ಬರ ಹಕ್ಕು, ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ನಡೆಯುತ್ತಿದ್ದು, 18 ವರ್ಷ ತುಂಬಿದ ಎಲ್ಲ ವಿದ್ಯಾರ್ಥಿಗಳು ಹೆಸರನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಯುವ ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಿ ತಮ್ಮ ಮತವನ್ನು ಮಾರಿಕೊಳ್ಳಬಾರದು. ಉತ್ತಮ ಪ್ರಜಾಪ್ರಭುತ್ವ ನಿರ್ಮಾಣಗೊಳ್ಳಲು ಸ್ವಯಂ ಪ್ರೇರಿತವಾಗಿ ಅರ್ಹ ಮತ್ತು ಉತ್ತಮ ನಾಯಕರನ್ನು ಆರಿಸಬೇಕು ಎಂದು ಸಲಹೆ ನೀಡಿದರು.
ಎಸ್ಪಿ ರಂಜಿತ್‌ಕುಮಾರ್ ಬಂಡಾರು ಮಾತನಾಡಿ, ಪ್ರಜಾಸ್ವಾಮ್ಯ ವ್ಯವಸ್ಥೆ ಎಂದರೆ ಅದು ಜನರ ಅಧಿಕಾರ, ಆ ಅಧಿಕಾರವು ಪ್ರತಿಯೊಬ್ಬರು ಮತದಾನ ಮಾಡುವುದರ ಮೂಲಕ ಸಿಗುತ್ತದೆ ಎಂದು ತಿಳಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಮತದಾರರ ಪಟ್ಟಿಗೆ ಸೇರ್ಪಡೆಗೆ ಸಂಬಂಧಿಸಿದಂತೆ ಸಂವಾದ ನಡೆಸಿದರು.
ಎಡಿಸಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ಹೇಮಂತ್.ಎನ್, ಪ್ರೊಬೆಷನರಿ ಅಧಿಕಾರಿ ರೂಪಿಂದರ್ ಕೌರ್, ತಹಸೀಲ್ದಾರ ವಿಶ್ವನಾಥ, ಪ್ರಾಂಚಾರ್ಯ ಮಂಜುನಾಥ ರೆಡ್ಡಿ, ಲೀಡ್ ಕಾಲೇಜ್ ಮತದಾರರ ಕ್ಲಬ್‌ನ ಸಂಯೋಜಕ ಜನಾರ್ಧನ ರೆಡ್ಡಿ ಸೇರಿದಂತೆ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.