ಬಳ್ಳಾರಿ ಜಿಲ್ಲೆಯ ಕಲಾವಿದಗೆ ರಾಜ್ಯೋತ್ಸವ ಪ್ರಶಸ್ತಿ

nagendra
Published on

ಕುರುಗೋಡು: ಆಯ್ಕೆಯಲ್ಲಿನ ದೋಷದಿಂದ ಬಳ್ಳಾರಿ ಜಿಲ್ಲೆಗೆ ರಾಜ್ಯೋತ್ಸವ ಪ್ರಶಸ್ತಿ ಕೈತಪ್ಪಿದೆ. ಆದರೆ, ಈಗಾಗಲೇ ಅರ್ಜಿ ಸಲ್ಲಿಸಿದವರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ಮಲಪನಗುಡಿ ಗ್ರಾಮದ ಡೊಳ್ಳು ಕುಣಿತ ಕಲಾವಿದ ಎಚ್.ಕೆ.ಕಾರಮಂಚಪ್ಪ ಅವರನ್ನು ಬಳ್ಳಾರಿ ಜಿಲ್ಲೆಯವರೆಂಬ ತಪ್ಪು ಗ್ರಹಿಕೆಯಿಂದ ಈ ದೋಷವಾಗಿದೆ. ಜಿಲ್ಲೆಯಿಂದ ಅರ್ಜಿ ಸಲ್ಲಿಸಿದ ಅರ್ಹ ಕಲಾವಿದರೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡಲಾಗುವುದು ಎಂದು ತಿಳಿಸಿದರು.

ಮಳೆ ಇಲ್ಲದೆ ಜಿಲ್ಲೆಯಲ್ಲಿ ಬರ ಆವರಿಸಿದೆ. ನ.10 ರಿಂದ ತುಂಗಭದ್ರಾ ಮೇಲ್ಮಟ್ಟದ ಕಾಲುವೆಗೆ ನೀರು ಸ್ಥಗಿತಗೊಳಿಸಲು ಈ ಮೊದಲು ನಿರ್ಧರಿಸಲಾಗಿತ್ತು. ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ನೀರಿನ ಅಗತ್ಯವಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆ ಇದೆ. ಆದರೂ ನ.15ರವರೆಗೆ ನೀರು ಹರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ಆನಂದ ಚೌದ್ರಿ, ಬೆಣಕಲ್ಲು ಬಸವರಾಜ, ಜಗದೀಶ್ ಮತ್ತು ವೆಂಕಟರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net