ಬಳ್ಳಾರಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ

index
Published on

ಬಳ್ಳಾರಿ: ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ನಮ್ಮೆಲ್ಲರ ಅಸ್ಮಿತೆ ಆಗಬೇಕು ಎಂದು ಸಮ್ಮೇಳನದ ಸರ್ವಾಧ್ಯಕ್ಷತೆವಹಿಸಿದ್ದ ಡಾ.ಅರವಿಂದ ಪಟೇಲ್‌ಹೇಳಿದರು.

ನಗರದ ರಾಘವ ಕಲ್ಮಾಂದಿರದಲ್ಲಿ ಬುಧವಾರ ಬಳ್ಳಾರಿ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಕುಸಿಯುತ್ತಿರುವ ಮಾನವೀಯ ಸಂಬಂಧಗಳ ಕಾಲಘಟ್ಟದಲ್ಲಿ ನಾವಿದ್ದೇವೆ. ಜಾಗತೀಕರಣ ಭರಾಟೆಯಲ್ಲಿ, ಬದುಕು ವಾಣಿಜ್ಯೀಕರಣಗೊಂಡ ವ್ಯವಸ್ಥೆಯಲ್ಲಿ ಜೀವಿಸುತ್ತಿದ್ದೇವೆ. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆಯ ದಿನಗಳು ಬರಲಿದೆ. ಇಂತಹ ಬಿಕ್ಕಟ್ಟು, ನೆಲೆಗಟ್ಟಿನಲ್ಲಿ ಕನ್ನಡ ಸಾಹಿತ್ಯ ಸಾಗುತ್ತಿದೆ ಎಂದರು.

ಸ್ವಾತಂತ್ರೃ ಹೋರಾಟದಲ್ಲಿ ಹಾಗೂ ಕರ್ನಾಟಕ ಏಕೀಕರಣದಲ್ಲಿ ಜಿಲ್ಲೆಯ ಕೊಡುಗೆ ಅಪಾರ. ಪೈಲ್ವಾನ್ ರಂಜಾನ್ ಸಾಬ್, ಚನ್ನಬಸವನ ಗೌಡರು, ಟಿ.ಎಚ್.ಎಂ.ಸದಾಶಿವಯ್ಯ, ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ, ಚಂದ್ರಶೇಖರ ಶಾಸ್ತ್ರಿಗಳು, ಮುಂಡ್ಲೂರು ಗಂಗಪ್ಪ, ಹಿರೇಹಾಳದ ಇಬ್ರಾಹಿಂ ಸಾಬ್, ಅಳವಂಡಿ ಶಿವಮೂರ್ತಿ ಸ್ವಾಮಿಗಳು , ಬಣಕಾರ್ ಸಿದ್ದಲಿಂಗಪ್ಪ, ಗೋರ್ಲಿ ಶರಣಪ್ಪ ಹೀಗೆ ಅನೇಕ ಮಹನೀಯರು ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಸ್ಮರಿಸಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಜಿಲ್ಲೆಯ ಕೊಡುಗೆ ಇದೆ. ಬಳ್ಳಾರಿಯ ರಾಘವ, ಜೋಳದರಾಶಿ ದೊಡ್ಡನಗೌಡ, ಎಳಿವಾಳ ಸಿದ್ದಯ್ಯ ಅನೇಕರು ಸಾಧನೆಗೈದಿದ್ದಾರೆ. ಅವಧೂತ ಪರಂಪರೆಯನ್ನು ಹೊಂದಿದ್ದ ಜಿಲ್ಲೆ ಎನ್ನುವ ಖ್ಯಾತಿ ಬಳ್ಳಾರಿಗೆ ಇದೆ. ವಿಜಯನಗರ ಸಾಮ್ರಾಜ್ಯದ ಇತಿಹಾಸ ಅವಿಸ್ಮರಣೀಯ ಎಂದು ನುಡಿದರು.

ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ಆಯೋಜಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಕಳೆದ ಮೂರು ವರ್ಷಗಳ ಕಾಲ ಕರೊನಾದಿಂದಾಗಿ ಸಮ್ಮೇಳನಗಳನ್ನು ಆಯೋಜಿಸಿರಲಿಲ್ಲ. ಎಲ್ಲರ ಸಹಕಾರ ಇರಬೇಕು ಎಂದು ತಿಳಿಸಿದರು.

ಫಾದರ್ ಐವಾನ್ ಪಿಂಟೋ ಅಧ್ಯಕ್ಷತೆವಹಿಸಿದ್ದರು. ಗುತ್ತಿಗನೂರು ವಿರುಪಾಕ್ಷಪ್ಪ, ಸರ್ವಶೆಟ್ಟಿ ಮಾರುತಿ ಪ್ರಸಾದ್, ಜೆ.ಎಂ.ನಾಗಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net