ಬಳ್ಳಾರಿಯಲ್ಲಿ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮ

02022020 Bellary District Kannada Sammelana3
Published on

ಮಕ್ಕಳಿಗೆ ಪ್ರಾದೇಶಿಕ ಭಾಷೆಯಲ್ಲೇ ಸಿಗಲಿ ಶಿಕ್ಷಣ ಎಂದ ಸಮ್ಮೇಳನಾಧ್ಯಕ್ಷ ಜೆ.ಎಂ.ನಾಗಯ್ಯ

ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್ ವೇದಿಕೆ

ಬಳ್ಳಾರಿ: ಮಕ್ಕಳಿಗೆ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು. ಕನ್ನಡ ಕಲಿಕಾ ಮಾಧ್ಯಮ ಆಗಬೇಕೆಂದು ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜೆ.ಎಂ.ನಾಗಯ್ಯ ಅಭಿಪ್ರಾಯಪಟ್ಟರು.

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ನಾವು ವಾಸಿಸುವ ಪರಿಸರದ ಭಾಷೆಯಿಂದ ಮಕ್ಕಳಲ್ಲಿ ತರ್ಕ, ಭಾವನಾ ಶಕ್ತಿ ಹಾಗೂ ಯೋಚನಾ ಸಾಮರ್ಥ್ಯ ವೃದ್ಧಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಕಲಿಸಬೇಕು. ಗಡಿ ಭಾಗದ ಕನ್ನಡ ಶಾಲೆಗಳ ಸುಸ್ಥಿತಿ ಬಗ್ಗೆ ಗಮನಹರಿಸುವುದು ಕೂಡ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಜಿಲ್ಲೆಯ ಕಾವ್ಯ ಪರಂಪರೆ ತುಂಬಾ ಶ್ರೀಮಂತವಾಗಿದೆ. ಎಲ್ಲ ಕವಿ ಹಾಗೂ ಸಾಹಿತಿಗಳ ಸಮಗ್ರ ಕೈಪಿಡಿ ರಚಿಸಲು ಕಸಾಪ ಜಿಲ್ಲಾ ಘಟಕ ಯೋಜನೆ ರೂಪಿಸಬೇಕು. ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚಿನ ಶಾಸನಗಳು ಲಭ್ಯವಾಗಿವೆ. ಇವುಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಬೇಕಿದೆ. ಈ ಮೂಲಕ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರಪಂಚಕ್ಕೆ ಪರಿಚಯಿಸಬಹುದಾಗಿದೆ. ಈ ಬಗ್ಗೆ ಜಿಲ್ಲೆಯ ಶಾಸನ ತಜ್ಞರು, ವಿದ್ವಾಂಸರು, ಅನುವಾದಕರು ಗಮನಹರಿಸಬೇಕು ಎಂದರು. ಸಂಡೂರು ವಿರಕ್ತಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ಹೂವಿನಹಡಗಲಿಯ ರಂಗಭಾರತಿ ಸಂಸ್ಥೆ ಕಾರ್ಯಾಧ್ಯಕ್ಷೆ ಎಂ.ಪಿ.ಸುಮಾ ವಿಜಯ್, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್, ಡಿಡಿಪಿಐ ಸಿ.ರಾಮಪ್ಪ, ಡಿಡಿಪಿಯು ಬಿ.ಆರ್.ನಾಗರಾಜಪ್ಪ, ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ಶೇಖರಗೌಡ ಪಾಟೀಲ್ ಇತರರಿದ್ದರು.

ಸಭ್ಯ ಸಮಾಜ ನಿರ್ಮಾಣ ಅಗತ್ಯ

ಸಾಹಿತ್ಯ ಸಮ್ಮೇಳನ ಜಾತ್ರೆಯಂತೆ ನಡೆಯದೆ ಗಂಭೀರ ಚಿಂತನೆಗಳ ಮೂಲಕ ಉತ್ತಮ ಸಂದೇಶ ನೀಡುವ ಕಾರ್ಯಕ್ರಮ ಆಗಬೇಕೆಂದು ಸಮ್ಮೇಳನದ ಉದ್ಘಾಟಕ, ಜಾನಪದ ಸಾಹಿತಿ ಶಂಭು ಬಳಿಗಾರ ಹೇಳಿದರು. ಸಾಹಿತ್ಯದ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಆದರೆ, ಸಾಹಿತ್ಯದ ಬಗ್ಗೆ ಯಾರಿಗೂ ಲಕ್ಷ್ಯವಿಲ್ಲ. ಸಮಾಜ ವಿಕೃತಿ ಕಡೆಗೆ ಸಾಗುತ್ತಿದೆ. ಭ್ರಷ್ಟಾಚಾರ, ಅಧಿಕಾರ ಲಾಲಸೆ ಹೆಚ್ಚಿದೆ ಎಂದರು.

ನಾವು ಕರ್ನಾಟಕದ ರೆಡ್ಡಿಗಳು

ನಮ್ಮ ತಂದೆಯ ಕಾಲದಿಂದಲೂ ನಾವು ಕರ್ನಾಟಕದಲ್ಲಿದ್ದೇವೆ. ಇದರಿಂದಾಗಿ ನಾವು ಕರ್ನಾಟಕದ ರೆಡ್ಡಿಗಳು, ಆಂಧ್ರದ ರೆಡ್ಡಿಗಳಲ್ಲ ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಈ ಕುರಿತು ಹೋರಾಟ ಅನಿವಾರ್ಯವಾದರೆ ಎಲ್ಲರೂ ಸಿದ್ಧರಾಗಬೇಕು. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕೆಂದು ಹೇಳಿದರು.

ಪ್ರತಿಭಟನೆ ದಾಖಲಿಸಲಿಲ್ಲ ಎಂಬ ಬೇಸರ

ಸಾಹಿತ್ಯ ಎಂಬುದು ಕನ್ನಡಿಗರ ಆಸ್ತಿಯಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ನೀಡುವ ಅನುದಾನ ಜನರ ತೆರಿಗೆಯಿಂದ ಸಂಗ್ರಹವಾಗಿರುತ್ತದೆ. ಇದರಿಂದಾಗಿ ಸರ್ಕಾರದ ನಡೆ ಬಗ್ಗೆ ವಿನಮ್ರವಾಗಿ ನಡೆದುಕೊಳ್ಳಬೇಕೆಂದು ಇಲ್ಲ. ರಾಜ್ಯದಲ್ಲಿ ಇಂಗ್ಲಿಷ್ ಶಾಲೆಗಳು ಆರಂಭವಾದರೂ ಕಸಾಪ ಒಂದು ಪ್ರತಿಭಟನೆಯನ್ನೂ ದಾಖಲಿಸಲಿಲ್ಲ ಎಂದು ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ಕೆ.ಆರ್.ದುರ್ಗಾದಾಸ್ ಬೇಸರ ವ್ಯಕ್ತಪಡಿಸಿದರು. ಶ್ರೀರಾಮ ವೀರನಷ್ಟೇ ಆಗಿರದೆ ಪಿತೃವಾಕ್ಯ ಪಾಲಕನಾಗಿದ್ದ. ಶ್ರೀರಾಮ ಜೀವಪರ ನಿಷ್ಠೆ ಹೊಂದಿದ್ದ. ಕಾವ್ಯಗಳಿಂದ ಈ ರೀತಿಯ ಅಂಶಗಳನ್ನು ನಾವು ಪಡೆದುಕೊಳ್ಳಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net