ವಿಕಸಿತ ಭಾರತ ಎಲ್ಲರ ಜವಾಬ್ದಾರಿ

Published on

ಬಳ್ಳಾರಿ ; ಭಾರತೀಯರಾದ ನಾವು ನಮಗೆ ದೊರೆತಿರುವ ಪೌರತ್ವವನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕಾಗಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್ ಹೇಳಿದರು.

ಇಲ್ಲಿಯ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ಸೌತ್ ರೀಜಿನಲ್ ಸೆಂಟರ್ ಹಾಗೂ ವಿಎಸ್‌ಕೆ ವಿವಿಯ ರಾಜ್ಯಶಾಸ್ತ ಅಧ್ಯಯನ ವಿಭಾಗ ಸಹಯೋಗದಲ್ಲಿ ವಿಕಸಿತ ಭಾರತ 2047 ಭಾರತದಲ್ಲಿ ಸಾಂವಿಧಾನಿಕ, ಶಾಸಕಾಂಗ ಮತ್ತು ನ್ಯಾಯಾಂಗ ಸುಧಾರಣೆಗಳು ಕುರಿತು ಬುಧವಾರ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಕಸಿತ ಭಾರತದ ಅಭಿವೃದ್ಧಿ ಕನಸು ಎಲ್ಲರ ಜವಾಬ್ದಾರಿಯಾಗಲಿ. ಹಲವಾರು ರಾಜಕೀಯ ಚಿಂತಕರು ಸಮಾಜವನ್ನು ಅಭಿವೃದ್ಧಿಯತ್ತ ಸಾಗಲು ಶ್ರಮಿಸಿದ್ದಾರೆ. ನಮ್ಮ ಹಕ್ಕುಗಳು, ಜವಾಬ್ದಾರಿಗಳ ಕುರಿತಂತೆ ಪ್ರಶ್ನೆ ಕೇಳುವ ಮನೋಭಾವ ಪ್ರಬಲವಾಗಬೇಕಾಗಿದೆ. ರಾಜಕೀಯ ಚಿಂತಕರನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ಸಾಗುತ್ತಲೇ ಇದೆ. ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಾದ ನೀವು ಪ್ರಶ್ನಿಸುವ ಮನೋಭಾವದ ಜತೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ರಾಜಕೀಯ ಪಕ್ಷಗಳಿಗೆ ದೇಶಕ್ಕಿಂತ ಪಕ್ಷ ಮುಖ್ಯವಾಗಿದೆ. 2047ರ ಹೊತ್ತಿಗೆ ಯುವಕರು ರಾಷ್ಟ ರಾಜಕಾರಣದ ಅಧಿಕಾರ ಚುಕ್ಕಾಣಿ ಹಿಡಿಯಲ್ಲಿದ್ದಾರೆ ಎಂದು ಹೇಳಿದರು.

ಆಂಧ್ರಪ್ರದೇಶದ ಕೇಂದ್ರೀಯ ವಿಶ್ವವಿದ್ಯಾಲಯ ರಾಜ್ಯಶಾಸ್ತ ಪ್ರೊ.ಜಿ.ರಾಮರೆಡ್ಡಿ ಮಾತನಾಡಿ, ರಾಷ್ಟ್ರೀಯ ರಕ್ಷಣೆ ಮತ್ತು ರಾಷ್ಟ ನಿರ್ಮಾಣಕ್ಕಾಗಿ ಸಮರ್ಪಣೆಯಿಂದ ಪ್ರತಿಯೊಬ್ಬ ಭಾರತೀಯನು ಜವಾಬ್ದಾರಿಯಿಂದ ವರ್ತಿಸಿದೆರೆ ವಿಕಸಿತ ಭಾರತದ ಕನಸು ನೆರವೇರಲಿದೆ. ಸಂವಿಧಾನ, ಶಾಸಕಾಂಗ ಮತ್ತು ನ್ಯಾಯಾಂಗ ಸುಧಾರಣೆಯ ಮೇಲೆ ಎಲ್ಲರೂ ಗಮನ ಹರಿಸುವುದು ಮುಖ್ಯವಾಗಿದೆ. ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಸಂವಿಧಾನವು ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು.

ವಿವಿಯ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ಭವಿಷ್ಯದ ಭಾರತ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಅಪಾರವಾಗಿದೆ. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಕೌಶಲ್ಯಯುತ ಶಿಕ್ಷಣಕ್ಕೆ ಮಹತ್ವ ಕೊಡಬೇಕು. ಸ್ವ ಕುಟುಂಬವನ್ನು ಸದೃಢಗೊಳಿಸಿದರೆ ದೇಶವು ತಾನಾಗಿಯೇ ಬಲಗೊಳ್ಳುತ್ತದೆ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕು ಎಂದು ತಿಳಿಸಿದರು.

ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅನ್ಯ ರಾಜ್ಯಗಳ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net