ಶಾಲಾ ಆಸ್ತಿ ನೋಂದಣಿಗೆ ಇಲಾಖೆ ಹರಸಾಹಸ

Published on

ಬಳ್ಳಾರಿ ; ದಿನೇದಿನೆ ಗಗನಕ್ಕೆ ಏರುತ್ತಿರುವ ಬೆಲೆ ಹಾಗೂ ಗ್ರಾಮದ ಮಧ್ಯೆದಲ್ಲಿ ವಿಶಾಲವಾದ ಸ್ಥಳ ದೊರೆಯುವ ಉದ್ದೇಶದಿಂದ ಹಿರಿಯರು ಹಲವು ವರ್ಷಗಳ ಹಿಂದಯೇ ಸರ್ಕಾರಿ ಶಾಲೆಗಳಿಗೆ ದಾನ ಮಾಡಿದ ಭೂಮಿಯನ್ನು ಜಿಲ್ಲೆಯಲ್ಲಿ ಕುಟುಂಬಸ್ಥರು ಸರ್ಕಾರಕ್ಕೆ ಹಸ್ತಾಂತರಿಸಲು ಹಿಂದೇಟು ಹಾಕುತ್ತಿದ್ದಾರೆ.

ನಗರ ಹಾಗೂ ಜಿಲ್ಲೆಯ ಐದು ತಾಲೂಕುಗಳ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಸೇರಿ ಒಟ್ಟು 736 ಸರ್ಕಾರಿ ಶಾಲೆಗಳಿವೆ. ಇದರಲ್ಲಿ ಈವರೆಗೆ ಒಟ್ಟು 380 ಶಾಲೆಗಳು ಮಾತ್ರ ಸರ್ಕಾರಿ ಆಸ್ತಿಗಳಾಗಿ ನೋಂದಣಿಯಾಗಿದ್ದು , ಉಳಿದಂತೆ ಇನ್ನೂ 283 ಶಾಲೆಗಳು ನೋಂದಣಿಯಾಗದೆ ಅತಂತ್ರ ಸ್ಥಿತಿ ತಲುಪಿವೆ.

ಹಲವು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಗ್ರಾಮದ ಹೊರವಲಯದಲ್ಲಿ ಶಾಲೆಗಳು ನಿರ್ಮಿಸಲು ಹಿರಿಯರು ಭೂಮಿಗಳನ್ನು ದಾನ ಮೂಲಕ ನೀಡಲಾಗಿದೆ. ಆದರೆ, ಈಗ ಹಿರಿಯರು ದಾನ ನೀಡಿದ್ದ ಪತ್ರ ಆಧಾರಿಸಿ, ಶಿಕ್ಷಣ ಇಲಾಖೆಯವರು ಸಕಾಲಕ್ಕೆ ಆಸ್ತಿ ಹಸ್ತಾಂತರ ಪ್ರಕ್ರಿಯೆ ಕೈಗೊಳ್ಳದೆ ಇರುವುದು ದೊಡ್ಡ ಸಮಸ್ಯೆಯಾಗಿದೆ. ದಾನ ಮಾಡಿದ ಬಹುತೇಕ ಪೂರ್ವಿಕರು ಮರಣ ಹೊಂದಿದ ಕಾರಣ, ಅವರ ಕುಟುಂಬಸ್ಥರು ಮನವೊಲಿಸುವುದು ಇಲಾಖೆ ಹಾಗೂ ಸರ್ಕಾರಕ್ಕೆ ಸವಾಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಅಷ್ಟಾಗಿ ಬೆಲೆಯಿರಲಿಲ್ಲ. ಪೂರ್ವಜರು ಉದಾರಿಗಳು ಆಗಿದ್ದರು. ಆದರೆ, ಈಗ ಭೂಮಿ ಬೆಲೆ ಗಗನಕ್ಕೇರಿದೆ. ಪ್ರಸ್ತುತ ಒಂದು ಎಕರೆ ಕೋಟ್ಯಾಂತರ ರೂ. ಮಾರಾಟವಾಗುತ್ತಿದೆ. ಲಾಭದಾಸೆ ಹೊಂದಿರುವ ದಾನಿಗಳ ಕುಟುಂಬಸ್ಥರು ತಮ್ಮ ಪೂರ್ವಿಕರು ನೀಡಿದ್ದ ಜಮೀನು, ನಿವೇಶನವನ್ನು ಸರ್ಕಾರಕ್ಕೆ ಹಸ್ತಾಂತರಿಸಲು ಒಪ್ಪುತ್ತಿಲ್ಲ. ಈ ಶಾಲೆಗಳ ಕಟ್ಟಡಗಳ ಜಾಗ ಈಗಲೂ ದಾನಿಗಳ ಹೆಸರಿನಲ್ಲೇ ಇದೆ. ಹಲವರು ತಮ್ಮ ಜಮೀನು ಮರಳಿ ಪಡೆಯಲು ಕೋರ್ಟ್ ಮೆಟ್ಟಲೇರಿದ್ದರೆ. ಇನ್ನೂ ಕೆಲವರು ಶಾಲಾ ಕಾಲೇಜುಗಳಿಗೆ ತೆರಳಿ ನಿರ್ಮಾಣವಾಗಿರುವ ಕಟ್ಟಡಗಳ ಸ್ಥಳ ಮಾತ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಉಳಿದ ಸ್ಥಳವನ್ನು ಮರಳಿಸುವಂತೆ ಶಾಲಾ ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಇದರಿಂದ ಇಲಾಖೆಗೆ ನುಂಗಲಾರದ ತುತ್ತಾಗಿದೆ.

ಎಲ್ಲೆಲ್ಲಿ ಎಷ್ಟು : ಬಳ್ಳಾರಿ ಪೂರ್ವ 65, ಕುರುಗೋಡು 55, ಕಂಪ್ಲಿ 14, ಸಂಡೂರು 65, ಸಿರಗುಪ್ಪ 84 ಸೇರಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಸೇರಿದಂತೆ ಒಟ್ಟಾರೆ 283 ಶಾಲೆಗಳು ಸರ್ಕಾರ ಆಸ್ತಿಗಳಾಗಿ ನೋಂದಣಿಯಾಗದೆ ಉಳಿದಿವೆ. ಸದ್ಯ ಇದರಲ್ಲಿ ಕೆಲವೊಂದು ಗ್ರಾಪಂ, ಪಟ್ಟಣ ಪಂಚಾಯಿತಿ, ನಗರಸಭೆ, ತಹಸೀಲ್ದಾರ್, ಮಹಾನಗರ ಪಾಲಿಕೆ, ಎಸಿ ಕಚೇರಿಗಳ ಹಂತದಲ್ಲಿವೆ. ಇನ್ನೂ ಕೆಲವು ದಾನಿಗಳ ನಿರಾಕರಣೆ , ಆನ್‌ಲೈನ್ ರಿಜಿಸ್ಟರ್ ಕಾರಣ ದಾನ ಪತ್ರದ ಕಾರಣ ನೋಂದಣಿಯಾಗದೆ, ದಾಖಲಾತಿಗಳಿಲ್ಲದೆ ಇರುವುದರಿಂದ ನೋಂದಣಿಗೆ ದೊಡ್ಡ ಸಮಸ್ಯೆಯಾಗಿದೆ.

ಹಲವು ಸಮಸ್ಯೆ : ನಗರ ಪ್ರದೇಶದಲ್ಲಿ ಕೆಲ ವರ್ಷಗಳ ಹಿಂದಯೇ ಶಾಲೆಗೆ ದಾನ ನೀಡಿದ್ದ ಖಾಲಿ ಸ್ಥಳವನ್ನು ರಾಜಕೀಯ ಮುಖಂಡರ ಬೆಂಬಲದಿಂದ ಕೆಲವರು ಅಕ್ರಮವಾಗಿ ಸ್ಥಳ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿಕೊಂಡು ನಕಲಿ ದಾಖಲೆಗಳು ಕೂಡ ತಯಾರಿಸಿಕೊಂಡಿದ್ದಾರೆ. ಇದರಿಂದ, ಶಾಲೆಗಳಲ್ಲಿ ಆವರಣವಿಲ್ಲದೆ ಕೊಠಡಿಗಳಲ್ಲಿಯೆ ಮಕ್ಕಳು ಉಳಿಯುವಂತೆ ಪರಿಸ್ಥಿತಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿಶಾಲವಾದ ಸ್ಥಳದಲ್ಲಿ ಕೆಲವರು ಸೈಟ್‌ಗಳು ನಿರ್ಮಿಸಿಕೊಂಡು ಮಾರಾಟಕ್ಕೆ ಮುಂದಾಗಿದ್ದು ಇಲಾಖೆಯುವರು ಮರಳಿ ಪಡೆಯಲು ಕೋರ್ಟ್‌ಗಳಿಗೆ ಅಲೆದಾಡುತ್ತಿದ್ದಾರೆ. ಇನ್ನೂ ಹೊಸ ಶಾಲೆ ನಿರ್ಮಾಣ ಹಾಗೂ ಹೆಚ್ಚುವರಿ ಕೊಠಡಿಗಳಿಗೆ ಸ್ಥಳ ಸಿಗದೆ ಇರುವುದರಿಂದ ಗ್ರಾಮದಿಂದ ಒಂದರಿಂದ ಎರಡು ಕಿ.ಮೀ. ದೂರದಲ್ಲಿ ನಿರ್ಮಿಸುತ್ತಿದ್ದಾರೆ. ಅಲ್ಲದೆ, ಕೆಲ ಕಡೆ ಬಹುಮಹಡಿ ಕಟ್ಟಡಗಳು ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮದ ಹೊರವಲಯದಲ್ಲಿ ಶಾಲೆಗಳು ನಿರ್ಮಿಸುವುದರಿಂದ ಹುಡುಗಿಯರನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.

ಕೋಟ್... ಜಿಲ್ಲೆಯಲ್ಲಿ ಶಾಲಾ ಆಸ್ತಿ ನೋಂದಣಿ ಬಾಕಿಯಿದೆ. ಇದಕ್ಕೆ ಡಿಡಿಪಿಐ ಅಧಿಕಾರಿಗಳು ಹೊಣೆಗಾರಿಕೆ ಹೊಂದಬೇಕು. ಆಯಾ ವ್ಯಾಪ್ತಿಯ ತಹಶೀಲ್ದಾರ್ ಜತೆ ಸಹಭಾಗಿತ್ವ ಹೊಂದಿ ನೋಂದಣಿಗೆ ಆದ್ಯತೆ ವಿಷಯವಾಗಿ ಪರಿಗಣಿಸಬೇಕು.

- ಎಸ್.ಮಧುಬಂಗಾರಪ್ಪ, ಶಿಕ್ಷಣ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net