ಹಲವಾರು ಲಲಿತ ಕಲೆಗಳ ಸಂಗಮ -ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಎಡಿ ಚೋರನೂರು ಕೊಟ್ರಪ್ಪ ಹೇಳಿಕೆ

281222 Moka Culture Prog
ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಡಿ.ರಾಮಣ್ಣ ಉದ್ಘಾಟಿಸಿದರು.
Published on

ಬಳ್ಳಾರಿ: ರಂಗಭೂಮಿ ಜನತೆಯ ವಿಶ್ವವಿದ್ಯಾಲಯವಾಗಿದ್ದು, ಮಾನವನ ಅನುಭವಗಳ ಅಭಿವೃದ್ಧಿಗೆ ರಂಗಭೂಮಿ ಉತ್ತಮವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರಪ್ಪ ಹೇಳಿದರು.

ತಾಲೂಕಿನ ಮೋಕಾ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಶ್ರೀ ಮಹದೇವ ತಾತ ಕಲಾ ಸಂಘ ಹಂದ್ಯಾಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಂಗಭೂಮಿ ಮತ್ತು ರಂಗಕಲಾವಿದರು ವಿಚಾರ ಸಂಕಿರಣ ಮತ್ತು ಗೀತಗಾಯನ ಹಾಗೂ ಹಾಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾನಪದ ವೃತ್ತಿ, ಹವ್ಯಾಸಿ, ಬೀದಿನಾಟಕಗಳ ವಿವಿಧ ಪ್ರಕಾರಗಳನ್ನು ಹೊಂದಿದ ನಾಟಕಗಳಲ್ಲಿ ಶೈಕ್ಷಣಿಕ, ಸಮಸ್ಯೆ, ಕುರುಡು ನಂಬಿಕೆ, ಅನಕ್ಷರತೆ, ಜಾತೀಯತೆ, ವರದಕ್ಷಿಣೆ, ಕುಡಿತದ ಪರಿಣಾಮ ಮುಂತಾದವುಗಳ ಮೇಲೆ ಬೆಳಕು ಚೆಲ್ಲಿ, ಅವುಗಳಿಂದ ಜನೆತೆಯನ್ನು ಮುಕ್ತಿಗೊಳಿಸುವುದೇ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಮಹಾದೇವತಾತಾ ಕಲಾಸಂಘವು ಬೀದಿ ನಾಟಕ, ಸಾಮಾಜಿಕ, ಭಕ್ತಿಪ್ರಧಾನ, ಪೌರಾಣಿಕ ಹಾಗೂ ಬೀದಿ ನಾಟಕಗಳನ್ನು ಪ್ರದರ್ಶಿಸುವುದರ ಮೂಲಕ 18 ವರ್ಷಗಳಿಂದ ರಂಗಭೂಮಿ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.

ರಂಗಭೂಮಿ ಹಲವಾರು ಲಲಿತ ಕಲೆಗಳ ಸಂಗಮವಾಗಿದ್ದು, ನಾಟಕವೇ ಅದರ ಜೀವಾಳವಾಗಿದೆ. ಮನಸ್ಸನ್ನು ರಂಜಿಸಿ, ಆತ್ಮವನ್ನು ಮೇಲೆತ್ತುವ ಸಾಧನ ಇದಾಗಿದೆ. ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಗಳನ್ನು ಮೇಳೈಸಿಕೊಂಡು ನಾಟಕವು ಜನಪ್ರಿಯ ದೃಶ್ಯ ಕಾವ್ಯವಾಗಿದೆ. ಕಾಲೇಷು ನಾಟಕಂ ರಮ್ಯಂ ಎಂಬಂತೆ ವ್ಯಕ್ತಿಗಳ ಬೇರೆ ಬೇರೆ ಅಭಿಲಾಷೆಗಳಿಗೆ ತಕ್ಕಂತೆ ಮನೋ ರಂಜಿಸಿ, ಜೊತೆಗೆ ಸುಜ್ಞಾನವನ್ನು ಮೂಡಿಸುವ ಸಾಧನವಾಗಿದೆ. ಪಂಡಿತರನ್ನು ಪಾಮರರನ್ನು, ಹಿರಿಯ-ಕಿರಿಯರನ್ನು, ಗಂಡು-ಹೆಣ್ಣು ಎಲ್ಲರನ್ನು ಸೆರೆ ಹಿಡಿಯುವ ಸಾಮರ್ಥ್ಯ ನಾಟಕಕ್ಕೆ ಮಾತ್ರ ಇದೆ. ನೋಡುವ ಪ್ರೇಕ್ಷಕರ ಮನ ರಂಜಿಸಿ ಬದುಕಿನ ದರ್ಶನವನ್ನು ನೀಡುವಲ್ಲಿ ನಾಟಕಗಳು ಯಶಸ್ವಿಯಾಗಿವೆ ಎಂದರು.

ಮೋಕಾ ಗ್ರಾಪಂ ಅಧ್ಯಕ್ಷ ಡಿ.ರಾಮಣ್ಣ, ಶ್ರೀ ಮರುಳಸಿದ್ದಾಶ್ರಮದ ಶ್ರೀ ನಂಜುಂಡೇಶ್ವರ ಸ್ವಾಮೀಜಿ, ಸಹ ಪ್ರಾಧ್ಯಾಪಕ ಡಾ. ಹೊನ್ನೂರ ಅಲಿ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮೆಹತಾಬ್, ಸಾಹಿತಿ ಕೆ.ಭುವನೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಪ್ಪಗಲ್ಲು ಬಿ.ಚಂದ್ರಶೇಖರ ಆಚಾರ್, ನಿವೃತ್ತ ಮುಖ್ಯ ಶಿಕ್ಷಕ ಕೋರಿ ಸದಾಶಿವಪ್ಪ, ಮಂಜುನಾಥ ಗೋವಿಂದವಾಡ, ಹಾಸ್ಯ ಕಲಾವಿದ ಎರ‌್ರಿಸ್ವಾಮಿ, ರಂಗಕಲಾವಿದ ಎಚ್.ಅಂಬರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net