ನಾಗರಿಕರಿಗೆ ಸೌಲಭ್ಯ ಕಲ್ಪಿಸಲು ಒತ್ತಾಯ

Published on

ಬಳ್ಳಾರಿ : ನಗರದಲ್ಲಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಜನತೆಗೆ ಸೂಕ್ತ ನಾಗರಿಕ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯ ಆವರಣದಲ್ಲಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ಬಿಎನ್‌ಎಚ್‌ಎಸ್ ನ ಜಿಲ್ಲಾ ಸಂಚಾಲಕ ಸೋಮಶೇಖರ್ ಗೌಡ ಮಾತನಾಡಿ, ಈಗಾಗಲೇ ನಗರಾದ್ಯಂತ ಕೈಗೊಂಡಿರುವ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ವಿಳಂಬ ಮಾಡದೆ ತುರ್ತಾಗಿ ಮಾಡಿ ಮುಗಿಸಿ, ರಸ್ತೆಗಳ ಕುಣಿಗಳನ್ನು ಮುಚ್ಚಿ, ನಗರದಲ್ಲಿ ಬಾರಿ ವಾಹನಗಳ ಸಂಚಾರ ತಡೆಯಲು ತುರ್ತಾಗಿ ವರ್ತುಲ ರಸ್ತೆ ನಿರ್ಮಿಸಬೇಕು. ರಾತ್ರಿ ವೇಳೆಯಲ್ಲಿ ಕಾಮಗಾರಿಯ ಕೆಲಸಗಳನ್ನು ಕೈಗೊಂಡು ಜನತೆಗೆ ತೊಂದರೆಯಾಗದಂತೆ ಕಾಮಗಾರಿಗಳನ್ನು ಬೇಗ ಮುಗಿಸಬೇಕು ಎಂದು ತಿಳಿಸಿದರು.

ಹಳೇ ಬಸ್ ನಿಲ್ದಾಣದ ಬಳಿ ಒಂದು ಕಡೆ ಸರ್ವಿಸ್ ರಸ್ತೆ ನಿರ್ಮಿಸಬೇಕು. ವಾಹನಗಳ ಸಂಚಾರಕ್ಕೆ ಇರುವ ಅಡ್ಡಿಯನ್ನು ತೆರವುಗೊಳಿಸಬೇಕು. ಬೀದಿ ನಾಯಿ ಹಾಗೂ ಬೀಡಾಡಿ ದನಗಳಿಂದ ಆಗುವ ಅಪಾಯ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಕುಡಿವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗದಂತೆ ಕ್ರಮ ಕೈಗೊಳ್ಳಬೇಕು. ಅವೈಜ್ಞಾನಿಕ ಯೋಜನೆರಹಿತ ಕಾಮಗಾರಿಗಳಿಂದ ಜನತೆಗೆ ಕಿರುಕುಳವಾಗುವುದನ್ನು ತಪ್ಪಿಸಲು ಆದ್ಯತೆ ಮೇರೆಗೆ ಯೋಜನೆ ಬದ್ಧವಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯು ಕೂಡಲೇ ಎಚ್ಚೆತ್ತುಕೊಂಡು ಜನತೆಯ ಈ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಹೋರಾಟಕ್ಕೆ ಜನತೆ ಸಜ್ಜಾಗುವುದು ಶತಶಿದ್ಧ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net