ಬಳ್ಳಾರಿ : ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಕೇಂದ್ರ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಇಲ್ಲಿನ ರಾಯಲ್ ವೃತ್ತದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯ ಸಂಚಾಲಕ ಎ. ಮಾನಯ್ಯ ಮಾತನಾಡಿ, ರಾಜ್ಯಸಭೆಯಲ್ಲಿ 75ನೇ ವರ್ಷದ ಸಂವಿಧಾನ ಚರ್ಚೆಯಲ್ಲಿ ಮಾತನಾಡುವಾಗ ಅಮಿತ್ ಷಾ ಅವರ ಮನಸ್ಥಿತಿ ಏನೆಂದು ದೇಶದ ಜನರಿಗೆ ಗೊತ್ತಾಗುತ್ತದೆ. ಅಂಬೇಡ್ಕರ್ ಬರೆದ ಸಂವಿಧಾನ ಇಲ್ಲದಿದ್ದರೆ ಅಮಿತ್ ಷಾ ಗುಜಾರಿ ವ್ಯಾಪಾರ ಮಾಡುತ್ತಿದ್ದರು. ಅವರನ್ನು ಸಮರ್ಥನೆ ಮಾಡಿದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಯಾವುದಾದರೂ ಒಂದು ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಾ ಕುಳಿತುಕೊಳ್ಳುತ್ತಿದ್ದರು. ಇವರನ್ನು ಸಮರ್ಥನೆ ಮಾಡುವ ಸಂಸದರು ಕೂಡ ಯಾರೋ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂವಿಧಾನ ಎಂದರೆ ಸಂಘದ ಪರಿವಾರದ ರೋಲ್ ಪುಸ್ತಕ ಅಲ್ಲ, ಈ ದೇಶದ ಸಮಗ್ರತೆ, ಏಕತೆ, ಜಾತ್ಯಾತೀತ ರಾಷ್ಟ್ರವಾದ ದೇಶದಲ್ಲಿ ಅಮಿತ್ ಷಾ ಅವರಂತೆ ಮನಸ್ಥಿತಿ ಉಳ್ಳವರು ಗೃಹ ಸಚಿವರಾಗಿ ಮುಂದುವರೆಯಬಾರದು. ಕೂಡಲೇ ದೇಶದ ಜನರ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.