ಬಳ್ಳಾರಿ : ಸರ್ಕಾರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜೋಳವನ್ನು ಪ್ರತಿ ಎಕರೆಗೆ 20 ಕ್ವಿಂಟಾಲ್‌ನಂತೆ ಖರೀದಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯು ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಆರ್.ಮಾಧವರೆಡ್ಡಿ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರ ಬೆಂಬಲ ಬೆಲೆ ಅಡಿಯಲ್ಲಿ ಜೋಳವನ್ನು ಪ್ರತಿ ರೈತನಿಂದ ಎಕರೆಗೆ ಹತ್ತು ಕ್ವಿಂಟಾಲ್ ನಂತೆ ಖರೀದಿ ಮಿತಿಯನ್ನು ನಿಗದಿಗೊಳಿಸಲಾಗಿರುತ್ತದೆ. ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಪ್ರದೇಶದಲ್ಲಿ ಈ ಬಾರಿ ಹೆಚ್ಚಿನ ರೈತರು ಜೋಳವನ್ನು ಬೆಳೆದಿದ್ದು ಹೆಚ್ಚಿನ ಇಳುವರಿಯು ಬಂದಿದೆ. ರೈತರು ಬೆಂಬಲ ಬೆಲೆ ಅಡಿಯಲ್ಲಿ ಜೋಳವನ್ನು ಮಾರಾಟ ಮಾಡಲು ಪ್ರಸ್ತುತವಾಗಿ ರಾಜ್ಯ ಸರ್ಕಾರ ನಿಗದಿಪಡಿಸಿದ ಮಿತಿಯಿಂದಾಗಿ ರೈತರು ಬೆಂಬಲ ಬೆಲೆಯ ಪ್ರಯೋಜನೆಯ ನಿರಾಸಕ್ತಿ ಮೂಡಿಸುವಂತಾಗಿದೆ. ಈಗಾಗಲೇ ಜೋಳ ಕಟಾವು ಆರಂಭಿಸಲಾಗಿದ್ದು ,ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ರೈತನಿಂದ ಎಕರೆಗೆ 20 ಕ್ವಿಂಟಾಲ್‌ನಂತೆ ಮಾರಾಟ ಮಾಡಲು ಆದೇಶ ಹೊರಡಿಸದಲ್ಲಿ ಖಾಸಗಿ ದಲ್ಲಾಳಿಗಳಿಗೆ ಕಡಿಮೆ ದರಕ್ಕೆ ಮಾಡುವ ರೈತನನ್ನು ತಡೆದಂತೆ ಆಗುತ್ತದೆ ಎಂದರು.
ರಾಯಚೂರಿನ ಸಹಕಾರಿ ಸಂಘಗಳಲ್ಲಿ ರೈತರು ಧಾನ್ಯಗಳನ್ನು ಬೆಂಬಲ ಬೆಲೆ ಮಾರಾಟ ಮಾಡಿಕೊಳ್ಳಲು ನೊಂದಣಿ ಮಾಡಿಸಲು ಅಂದಾಜು 29 ಕೇಂದ್ರಗಳಲ್ಲಿ ಅವಕಾಶ ಮಾಡಿಕೊಟ್ಟಿರುವುದರಿಂದ ಅದರಂತೆ ಜಿಲ್ಲೆಯ ಆಯಾ ಹಳ್ಳಿಗಳ ರೈತರು ಅವರ ವ್ಯಾಪ್ತಿಯಲ್ಲಿ ಸಹಕಾರಿ ಸಂಘದಲ್ಲಿ ನೊಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಬೇಕು. ಜಿಲ್ಲೆಯಲ್ಲಿ ಕೇವಲ ಒಂಬತ್ತು ಖರೀದಿ ಕೇಂದ್ರಗಳನ್ನು ತೆರೆದಿರುವುದರಿಂದ ಕೇಂದ್ರಗಳಲ್ಲಿ ಜನಸಂಖ್ಯೆ ದಟ್ಟಣೆ, ಆನ್‌ಲೈನ್ ತಂತ್ರಾಂಶದ ತೊಡಕು ಸೇರಿದಂತೆ ಸಮಸ್ಯೆ ಎದುರಿಸಲಿದ್ದಾರೆ. ಆದ್ದರಿಂದ, ಜಿಲ್ಲೆಯಲ್ಲಿ ನೊಂದಣಿಯಾದಂತಹ ಎಲ್ಲ ಸಹಕಾರಿ ಸಂಘಗಳಲ್ಲಿ ಖರೀದಿ ಕೇಂದ್ರ ತೆರೆಯಬೇಕು ಆಗ್ರಹಿಸಿದರು.