ಯುಜಿಸಿ ಆದೇಶದ ರದ್ದಿಗೆ ಆಗ್ರಹ

Published on

ಬಳ್ಳಾರಿ ; ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ಯುಜಿಸಿ ನಿಯಮದಂತೆ ನೇಮಕಾತಿಗೊಳಿಸುವ ಆದೇಶವನ್ನು ರದ್ದು ಮಾಡಬೇಕು ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಟಿ.ದುರುಗಪ್ಪ ಆಗ್ರಹಿಸಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಈ ಆದೇಶವನ್ನು ಹಿಂಪಡೆಯಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜು 10 ರಂದು ರಾಜ್ಯಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಯುಜಿಸಿ ನಿಯಮ ಜಾರಿಗೊಳಿಸಿದರೆ ಐದು ಸಾವಿರಕ್ಕೂ ಅಧಿಕ ಉಪನ್ಯಾಸಕರು ಹುದ್ದೆ ಕಳೆದುಕೊಂಡು ನಿರುದ್ಯೋಗ ಹೊಂದಲಿದ್ದಾರೆ. ಆದ್ದರಿಂದ, ಈ ಹಿಂದಿನ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿ, ಉಳಿದ ಹೆಚ್ಚುವರಿ ಕಾರ್ಯಭಾರಕ್ಕೆ ಹೊಸಬರಿಗೆ ಕೌನ್ಸಿಲಿಂಗ್ ಮಾಡಬೇಕು ಎಂದರು.

ಅತಿಥಿ ಉಪನ್ಯಾಸಕರ ಭವಿಷ್ಯಕ್ಕೆ ಪೂರಕವಾಗಿ ಪಿಎಫ್, ಆರೋಗ್ಯ ವಿಮೆ, ಜೀವ ವಿಮೆ, ಬೇರೆ ರಾಜ್ಯಗಳ ಮಾದರಿಯಲ್ಲಿ ಅತಿಥಿ ಉಪನ್ಯಾಸಕರಿಗೆ 67 ಸಾವಿರ ರೂ. ಒದಗಿಸಬೇಕು. ಪ್ರಸ್ತುತ 60 ವರ್ಷ ವಯೋಮಿತಿಯನ್ನು 65 ವರ್ಷಕ್ಕೆ ಹೆಚ್ಚಳ ಮಾಡಬೇಕು. ಐದು ಲಕ್ಷ ರೂ. ಇರುವ ಇಡಿಗಂಟನ್ನು 15 ಲಕ್ಷಕ್ಕೆ ಏರಿಸಿ ಹಾಗೂ ಪದೇಪದೆ ಕೌನ್ಸಿಲಿಂಗ್ ನೆಪದಲ್ಲಿ ಅತಿಥಿ ಉಪನ್ಯಾಸಕ ವಿರೋಧಿ ಅಧಿಕಾರಿಗಳನ್ನು ತಕ್ಷಣವೇ ಅವರನ್ನು ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಡಿ.ಸಿದ್ದೇಶ್, ಟಿ.ರುದ್ರಮುನಿ, ಗುರುರಾಜ್, ಎಸ್.ಎಂ.ರಮೇಶ, ಎಂ.ರಫಿ, ರಾಮಚಂದ್ರರಾವ್, ವೈ.ಎರ‌್ರಿಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net