ಬಳ್ಳಾರಿ : ದಿಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ದೇಶದ ಜನರಿಗೆ ಕೊಟ್ಟ ವಿಜಯದ ಸಂಕೇತವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ ಕುಮಾರ ಮೋಕಾ ಹೇಳಿದರು.
ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ದೆಹಲಿಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ಗೆಲವು ಸಾಧಿಸಿದ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಂಭ್ರಮಚಾರಣೆಯಲ್ಲಿ ಮಾತನಾಡಿದರು. ದೇಶದ ರಾಜಧಾನಿಯಲ್ಲಿ ಬಿಜೆಪಿಯು ಭವ್ಯವಾದ ವಿಜಯವನ್ನು ಸಾಧಿಸಿದೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತರೊಬ್ಬರು ದಿಲ್ಲಿಯ ಗದ್ದುಗೆಗೆ ಏರಲಿದ್ದಾರೆ. ಕಾಂಗ್ರೆಸ್ ಒಂದು ಕ್ಷೇತ್ರವೂ ಗೆಲ್ಲದೆ ಶೂನ್ಯವಾಗಿ ಉಳಿದಿದೆ. ದೇಶದಲ್ಲಿ ಕಾಂಗ್ರೆಸ್ ಹೀನಾಯವಾಗಿದೆ ಎಂಬುದಕ್ಕೆ ದೆಹಲಿಯ ಚುನಾವಣೆ ಫಲಿತಾಂಶ ಉದಾಹರಣೆಯಾಗಿದೆ. ಆಪ್ ಪಕ್ಷವನ್ನು ದೆಹಲಿ ಜನರು ಪೊರಕೆ ಹಿಡಿದು ಮೂಲೆಗುಂಪು ಮಾಡಿದ್ದಾರೆ. ಹಾಗಾಗಿ ಈ ಫಲಿತಾಂಶ ಕಾರ್ಯಕರ್ತರ ಜಯವಾಗಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್ ಮಾತನಾಡಿ, ಎರಡು ದಶಕಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸುಳ್ಳು ಆಶ್ವಾಸನೆಯಿಂದ ಅಧಿಕಾರ ನಡೆಸುತ್ತಿದ್ದ ಆಪ್ ಪಕ್ಷಕ್ಕೆ ಫಲಿತಾಂಶದ ಮೂಲಕ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲೇ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಬಾವುಟ ಹಾರಿಸುವುದು ಶತಸಿದ್ಧ ಎಂದು ಹೇಳಿದರು.
ಬಳಿಕ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೈ ಬಿಜೆಪಿ, ಜೈ ಮೋದಿ, ಜೈ ಅಮಿತಾ ಷಾ ಎಂದು ಘೋಷಣೆ ಕೂಗಿ ಸಂಭ್ರಮ ಹೊರ ಹಾಕಿದರು.