ಬಳ್ಳಾರಿ: ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಯಲ್ಲಿ ಅಸ್ಪಶ್ಯ ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಅ.2 ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅಸ್ಪಶ್ಯ ಅಲೆಮಾರಿ ಸಮುದಾಯದ ಮಹಾ ಒಕ್ಕೂಟದ ಅಧ್ಯಕ್ಷ ಶಿವಕುಮಾರ ವೈ. ಹೇಳಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಒಳ ಮೀಸಲಾತಿಯನ್ನು ಹಂಚುವ ವಿಚಾರದಲ್ಲಿ ಕರ್ನಾಟಕ ಅಲೆಮಾರಿ ಸಮುದಾಯಕ್ಕೆ ಆಗಿರುವ ಘೋರ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಮಧ್ಯೆ ಪ್ರವೇಶಿಸಲೇಬೇಕು. ಶತಮಾನಗಳ ಸಾಮಾಜಿಕ ಅನ್ಯಾಯವನ್ನು ಸರಿಪಡಿಸಲು ತ್ವರಿತಗತಿಯ ಮತ್ತು ಪರಿಣಾಮಕಾರಿ ಪ್ಯಾಕೇಜ್ ಘೋಷಣೆಯಾಗಬೇಕು ಎಂದು ಒತ್ತಾಯಿಸಿದರು.
ಅಲೆಮಾರಿ ಸಮುದಾಯವು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶೇ. 1 ರಷ್ಟು ಮೀಸಲಾತಿಗಾಗಿ ಅನಿರ್ದಿಷ್ಟ ಧರಣಿ ಕೈಗೊಂಡು 23 ದಿನಗಳು ಕಳೆದಿವೆ. ಆದರೆ, ರಾಜ್ಯ ಸರ್ಕಾರ ಸುಲಭವಾಗಿ ನಮ್ಮ ಸಮಸ್ಯೆಯನ್ನು ಆಲಿಸುತ್ತಿಲ್ಲ. ಹೀಗಾಗಿ ಕೊನೆಯ ಭರವಸೆಯಾಗಿ ಕಾಂಗ್ರೆಸ್‌ನ ಹೈಕಮಾಂಡ್ ನಾಯಕರನ್ನು ಖುದ್ದು ಕಾಣ ಬಯಸುತ್ತಿದ್ದೇವೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಮಧ್ಯಪ್ರವೇಶ ಮಾಡಿದಲ್ಲಿ ಈ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ಅರ್ಥ ಮಾಡಿಕೊಂಡು ಬಗೆಹರಿಸುವರು ಎಂಬ ವಿಶ್ವಾಸವಿದೆ. ಆದ್ದರಿಂದ, ರಾಜ್ಯದ ಸಾವಿರ ಅಲೆಮಾರಿಗಳು ದೆಹಲಿ ಚಲೋ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ಮುಖಂಡರಾದ ಅಜ್ಜಪ್ಪ, ಸುಬ್ಬಣ್ಣ, ಕೆ.ಸತ್ಯಪ್ಪ, ಎಸ್.ಎಂ.ಮಹೇಶ್, ರಾಮಾಂಜನಿ ಇದ್ದರು.