

ಬಳ್ಳಾರಿ: ನಗರದ ಮುಂಡರಗಿ ಅಶ್ರಯ ಮಹಾತ್ಮಗಾಂಧಿ ಟೌನ್‌ಶಿಪ್, ಜಿ+2 ಮಾದರಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ನಿಗದಿಪಡಿಸಿದ ಗಡುವಿನೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮುಂಡರಗಿ ಆಶ್ರಯ ಮಹಾತ್ಮಗಾಂಧಿ ಟೌನ್‌ಶಿಪ್, ಜಿ+ ಮನೆಗಳ ನಿರ್ಮಾಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗುತ್ತಿಗೆದಾರರು ಯಾವುದೇ ಸಬೂಬು ಹೇಳದೆ ತಮಗೆ ವಹಿಸಲಾದ ಅವಧಿಯೊಳಗೆ ಕಾಮಗಾರಿ ಮುಗಿಸಿ ಎಂದು ಗುತ್ತಿಗೆ ಜವಾಬ್ದಾರಿ ಹೊಣೆ ಹೊತ್ತ ಎನ್‌ಸಿಸಿ ಲಿಮಿಟೆಡ್ ಅಧಿಕಾರಿಗಳಿಗೆ ಸೂಚಿಸಿದ ಡಿಸಿ, ಈಗಾಗಲೇ ಆಯ್ಕೆ ಮಾಡಲಾಗಿರುವ ಫಲಾನುಭವಿಗಳಿಗೆ ಮನೆ ಹಸ್ತಾಂತರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಫಲಾನುಭವಿಗಳ ಆಯ್ಕೆ, ಸಾಲದ ಅರ್ಜಿ ಬ್ಯಾಂಕ್‌ಗಳಿಗೆ ಸಲ್ಲಿಸಿದ ಕುರಿತು, ಆದಾಯ ಪ್ರಮಾಣಪತ್ರ, ಪ್ರೊಜೆಕ್ಟ್ ರಿಪೋರ್ಟ ಮತ್ತು ರಿಲೀಸ್ ಸ್ಕೆಡ್ಯೂಲ್, ಕಾಮಗಾರಿ ಅನುಮತಿ, ಮೌಲ್ಯಮಾಪನ ಪ್ರೊಜೆಕ್ಟ್, ಪ್ರೊವಿಜನಲ್ ಅಲೋಟ್ಮೆಂಟ್ ಲೇಟರ್, ಸೇಲ್ ಕಂ ಲೀಸ್ ಡೀಡ್, ರೇರಾ ಆನ್‌ಲೈನ್ ಸೇರಿ ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆ ಸೂಚನೆಗಳನ್ನು ಡಿಸಿ ನೀಡಿದರು.
ಜಿ+2 ಮಾದರಿಯಲ್ಲಿ 5616 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 2592 ಮನೆಗಳನ್ನು ನಿರ್ಮಿಸಲಾಗುತ್ತಿದೆ. 2ನೇ ಹಂತದಲ್ಲಿ 3024 ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಸಭೆಗೆ ತಿಳಿಸಿದರು.
ಈಗಾಗಲೇ 2389 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಮೊದಲನೇ ಕಂತಿನ ವಂತಿಕೆ ಹಣ ಪಾವತಿಸಿರುತ್ತಾರೆ. 629 ಅರ್ಜಿದಾರರು ವಸತಿ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದ್ದು, ಆಶ್ರಯ ಸಮಿತಿಯಿಂದ ಅನುಮೋದನೆ ಪಡೆದು ಸಲ್ಲಿಸಬೇಕಿರುವ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು.
ಹಣ ಪಾವತಿಸಿದ 2389 ಫಲಾನುಭವಿಗಳ ಪೈಕಿ 2355ಫಲಾನುಭವಿಗಳ ಸಾಲದ ಅರ್ಜಿ ಹಾಗೂ ದಾಖಲೆಗಳನ್ನು ಬ್ಯಾಂಕ್‌ಗೆ ಸಲ್ಲಿಸಲಾಗಿದ್ದು, ಉಳಿದ 34 ಅರ್ಜಿಗಳನ್ನು ಶೀಘ್ರ ಸಲ್ಲಿಸಲಾಗುವುದು ಎಂದು ಪಾಲಿಕೆಯ ವಸತಿ ಶಾಖೆಯ ಅಧಿಕಾರಿ ದೇವರಾಜ ಡಿಸಿ ಗಮನಕ್ಕೆ ತಂದರು.
ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್ ಪ್ರತಿನಿಧಿಗಳು ಇದ್ದರು.