

ಬಳ್ಳಾರಿ: ಕರೊನಾ ತಡೆಗೆ ವ್ಯಾಪಕ ಕ್ರಮ ಕೈಗೊಳ್ಳುತ್ತಿರುವ ಡಿಸಿ ಎಸ್.ಎಸ್.ನಕುಲ್, ಮಧ್ಯರಾತ್ರಿಯಾದರೂ ಸರಿಯೇ, ಆಪತ್ಕಾಲದಲ್ಲೂ ಜನರಿಗೆ ಸ್ಪಂದಿಸುತ್ತಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಶವ ಸಾಗಣೆಗೆ ಮಧ್ಯರಾತ್ರಿ ಸ್ಪಂದಿಸುವ ಮೂಲಕ ಡಿಸಿ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಗಾಂಧಿನಗರದಲ್ಲಿರುವ ಖಾಸಗಿ ಉದ್ಯೋಗಿ, ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಬಂಡಿಹಾಳ ಗ್ರಾಮದ ನಿವಾಸಿ ಚನ್ನಪ್ಪ ಅವರ ತಂದೆ ಮಲ್ಲಿಕಾರ್ಜುನ ಅನಾರೋಗ್ಯದಿಂದ ಬುಧವಾರ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಆದರೆ, ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಲು ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಸುಲಭವಿರಲಿಲ್ಲ. ವಿಷಯ ತಿಳಿದ ವಿಜಯವಾಣಿ ಸಿಬ್ಬಂದಿ, ಮಧ್ಯರಾತ್ರಿಯೆ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ. ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ ಡಿಸಿ, ತಮ್ಮ ಪಿಎ ಮಂಜುನಾಥಗೆ ಅನುಮತಿ ಪತ್ರ ನೀಡುವಂತೆ ಹೇಳುವ ಮೂಲಕ ಮೃತರ ಕುಟುಂಬಕ್ಕೆ ಸ್ಪಂದಿಸಿದ್ದಾರೆ. ದಾರಿ ಮಧ್ಯದಲ್ಲಿ ಹೊಸಪೇಟೆ ಬಳಿ ಪೊಲೀಸರು ವಿಚಾರಿಸಿದಾಗ ಅನುಮತಿ ಪತ್ರ ತೋರಿಸಿ ಮುಂದಕ್ಕೆ ಹೋಗಿದ್ದಾರೆ.
ಇದೆಲ್ಲದರ ಹೊರತಾಗಿ ಮಾಧ್ಯಮದವರಿಗೆ ಮಾತ್ರ ಸರಿಯಾಗಿ ಸ್ಪಂದಿಸುವುದಿಲ್ಲ, ಅವರನ್ನು ದೂರವಿಟ್ಟು ಕೆಲಸ ಮಾಡುತ್ತಾರೆ ಎನ್ನುವ ಆರೋಪವಿದ್ದರೂ ಮಿತಭಾಷಿಯಾಗಿರುವ ಎಸ್.ಎಸ್.ನಕುಲ್, ಕರೊನಾ ತಡೆಗಾಗಿ ದಿನದ 24 ಗಂಟೆ ದಣಿವರಿಯದೇ ಶ್ರಮಿಸುತ್ತಿದ್ದಾರೆ.
ಸಂಕಷ್ಟದಲ್ಲಿದ್ದ ನಮಗೆ ಡಿಸಿ ಅನುಮತಿ ಪತ್ರ ನೀಡುವ ಮೂಲಕ ಅನುಕೂಲ ಕಲ್ಪಿಸಿದ್ದಾರೆ. ಇದಕ್ಕೂ ಮೊದಲು ಅನುಮತಿ ಪತ್ರ ಹೇಗೆ ? ಎಲ್ಲಿಂದ ತೆಗೆದುಕೊಳ್ಳಬೇಕು ಎಂಬುದರ ಮಾಹಿತಿಯಿರಲಿಲ್ಲ. ಈ ವೇಳೆ ವಿಜಯವಾಣಿ ನೀಡಿದ ಸಹಕಾರಕ್ಕೆ ಚಿರಋಣಿ.| ಚನ್ನಪ್ಪ, ಮೃತನ ಮಗಮಿಡ್‌ನೈಟ್ ವಿಜಯವಾಣಿ ಸಿಬ್ಬಂದಿಯಿಂದ ವಿಷಯ ತಿಳಿಯಿತು. ಕೂಡಲೇ ನಮ್ಮ ಸಹಾಯಕ ಅಧಿಕಾರಿಗೆ ಫೋನ್ ಮಾಡಿ, ಅನುಮತಿ ಪತ್ರ ನೀಡುವಂತೆ ಸೂಚಿಸಿದೆ.| ಎಸ್.ಎಸ್.ನಕುಲ್, ಡಿಸಿ ಬಳ್ಳಾರಿ