ಡಿಸಿಗೆ ಅಧಿಕಾರಿಗಳ ವರ್ಗಾವಣೆ ಸವಾಲು

Published on

ಬಳ್ಳಾರಿ : ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಒಂದೇ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ವರ್ಗಾವಣೆ ನೂತನ ಜಿಲ್ಲಾಧಿಕಾರಿಗೆ ಸವಾಲುಯಾಗಿ ಪರಿಣಮಿಸಲಿದೆ ಎಂಬ ಚರ್ಚೆ ಆರಂಭಗೊಂಡಿದೆ.

ಅಖಂಡ ಜಿಲ್ಲೆಯಿಂದ ವಿಜಯನಗರ ಪ್ರತ್ಯೇಕಗೊಂಡ ಬಳಿಕ ಚಿಕ್ಕ ಜಿಲ್ಲೆಯಂಥಾದರೂ ಹಲವು ಕಾರಣಗಳಿಂದಾಗಿ ಬಳ್ಳಾರಿ ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದಿದೆ. ನೆರೆಯ ಆಂಧ್ರಗಡಿ ಹೊಂದಿಕೊಂಡಿದ್ದು ಗಣಿಗಾರಿಕೆ, ಉದ್ದಿಮೆ, ಕೈಗಾರಿಕೆ, ರಾಜಕೀಯವಾಗಿ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಪ್ರಮುಖ ವ್ಯಕ್ತಿಗಳು ಸ್ಪರ್ಧಿಸಿ ವಿಜೇರಾಗಿದ್ದಾರೆ ಎಂಬ ಖ್ಯಾತಿ ಪಡೆದಿದೆ. ಇದರ ಜತೆಗೆ ಕೆಎಂಆರ್‌ಸಿ, ಡಿಎಂಎಫ್ ಹಾಗೂ ಕೆಕೆಆರ್‌ಡಿಬಿ ಅನುದಾನ ದೊರೆಯುವುದರಿಂದ ಸರ್ಕಾರಕ್ಕೆ ನೂರಾರು ಪ್ರಸ್ತಾವನೆಗಳು ಸಲ್ಲಿಕೆಯಾಗುವುದು ಸಾಮಾನ್ಯವಾಗಿದೆ.

ಜಿಲ್ಲೆಗೆ ಈ ಮುನ್ನ ನಿಯೋಜನೆಗೊಂಡಿರುವ ಕೆಲ ಜಿಲ್ಲಾಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ, ಇನ್ನೂ ಕೆಲವರು ಜಿಲ್ಲೆಯ ಅಭಿವೃದ್ಧಿಗೆ ಪಣತೊಟ್ಟು ರಾಜಕೀಯ ಮುಖಂಡರ ಜೈಲಿಗೆ ಕಳುಹಿಸಿದ ಇತಿಹಾಸ ಕೂಡವಿದೆ. ಆದರೆ, ಈವರೆಗೆ ಯಾವ ಜಿಲ್ಲಾಧಿಕಾರಿಯೂ ಹಲವು ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿರುವ ಅಧಿಕಾರಿಗಳ ವರ್ಗಾವಣೆ ಬಗ್ಗೆ ನಿರ್ಧಾರ ಕೈಗೊಂಡಿರಲಿಲ್ಲ. ನಾಗೇಂದ್ರ ಪ್ರಸಾದ್ ಕೆ. ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಬೆನ್ನಲ್ಲೇ ಇಲಾಖೆಯಲ್ಲಿ ಭ್ರಷ್ಟಚಾರ ತಡೆ ಹಾಗೂ ಪಾರದರ್ಶಕ ಆಡಳಿತ ಸಲುವಾಗಿ ಕೆಲ ಅಧಿಕಾರಿಗಳ ವರ್ಗಾವಣೆ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದ್ದಾರೆ ಎಂಬುದಾಗಿ ಅಪ್ತ ಮೂಲಗಳು ಖಚಿತಪಡಿಸಿದವು.

ಪ್ರಭಾವಿಗಳ ಒತ್ತಡ : ಜಿಲ್ಲೆ ಹಾಗೂ ತಾಲೂಕಿನ ಪ್ರಮುಖ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಹಿರಿಯ ಅಧಿಕಾರಿಗಳಿಗೆ ಪ್ರಭಾವಿ ರಾಜಕೀಯ ನಾಯಕರ ಬೆಂಬಲ, ಜಾತಿ ಬಲ ಹಾಗೂ ಮೇಲಧಿಕಾರಿಗಳ ಸಂಪರ್ಕದಿಂದ ಈವರೆಗೆ ವರ್ಗಾವಣೆ ಬಗ್ಗೆ ಯಾವ ಡಿಸಿ ಕೂಡ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ, ಕೆಲ ಅಧಿಕಾರಿಗಳು ಬೇರೆ ಬೇರೆ ಇಲಾಖೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ಇಲ್ಲಿಯೇ ಬೀಡು ಬಿಟ್ಟಿದ್ದಾರೆ. ಜಿಲ್ಲೆಗೆ ನೇಮಕಗೊಂಡ ಎಂಟು ದಿನದಲ್ಲೇ ಡಿಸಿ ನಾಗೇಂದ್ರ ಪ್ರಸಾದ್ ಅವರು ಕೆಲ ಅಧಿಕಾರಿಗಳ ವರ್ಗಾವಣೆಯಾದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದು ಮನಗಂಡಿದ್ದಾರೆ. ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳ ಗುಣಮಟ್ಟ ಹಾಗೂ ಹೊಸದಾಗಿ ಸಲ್ಲಿಕೆಯಾಗಿರುವ ಡಿಪಿಆರ್‌ಗಳ ವೈಜ್ಞಾನಿಕವಾಗಿ ಕೂಡಿವೆ ಎಂಬ ಕಾರಣದಿಂದ ಮರುಪರಿಶೀಲನೆ ಕೈಗೊಳ್ಳಲಿದ್ದಾರೆ.

ಆಯುಕ್ತೆ ವರ್ಗಾವಣೆ : 2020ರಲ್ಲಿ ಐಎಎಸ್ ಶ್ರೇಣಿಯ ಅಧಿಕಾರಿಯಾಗಿದ್ದ ಪ್ರೀತಿ ಗೆಹ್ಲೋಟ್ ಮಹಾನಗರ ಪಾಲಿಕೆಯ ಆಯುಕ್ತೆಯಾಗಿ ನೇಮಕಗೊಂಡಿದ್ದರು. ಪಾಲಿಕೆಯಲ್ಲಿ ಒಂದೇ ಕಡೆ ಆರು ವರ್ಷಕ್ಕಿಂತ ಹೆಚ್ಚು ಕೆಲಸ ಮಾಡುವ ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಪತ್ರ ಬರೆದಿದ್ದರು. ಆದರೆ, ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ವರ್ಗಾವಣೆ ಆಗುವ ಮೊದಲೇ ಖುದ್ದು ಆಯುಕ್ತೆ ಪ್ರೀತಿ ಗೆಹ್ಲೋಟ್ ವರ್ಗಾವಣೆಗೊಂಡಿದ್ದು ಎಲ್ಲರಿಗೆ ಅಚ್ಚರಿ ಮೂಡಿತ್ತು. ಪ್ರೀತಿ ಗೆಹ್ಲೋಟ್ ಅವರು ಸ್ವಚ್ಛ ಭಾರತ್ ಅಭಿಯಾನಕ್ಕೆ ಸಂಬಂಧಿಸಿ ಜಿಲ್ಲೆಯ ಹಲವು ಸಂಘ ಸಂಸ್ಥೆಗಳ ನೆರವು ಪಡೆದು ಬಳ್ಳಾರಿಯನ್ನು ದೇಶದ ಉತ್ತಮ, ಸ್ವಚ್ಛ ನಗರಗಳ ಪಟ್ಟಿಯಲ್ಲಿ ತರುವ ಕನಸು ಹೊಂದಿದ್ದರು.

ಕೋಟ್... ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲವೊಂದು ಬದಲಾವಣೆಯಾಗುವುದು ಸಾಮಾನ್ಯ. ಅದರಂತೆ, ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ಗಾವಣೆ ಸಂಬಂಧಿಸಿ ಕ್ರಮವಹಿಸಲಾಗುವುದು.

- ನಾಗೇಂದ್ರ ಪ್ರಸಾದ್ ಕೆ., ಡಿಸಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net