ಬಳ್ಳಾರಿ : ಮಹಿಳಾ ಅಭಿವೃದ್ಧಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡುಬರುವ ಸಮುದಾಯಗಳಲ್ಲಿ ಅದರಿಂದಾಗುವ ದುಷ್ಪರಿಣಾಮ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಶಾಲೆಯಲ್ಲಿ ಮಕ್ಕಳು ತಮ್ಮ ಮೇಲಿನ ದೌರ್ಜನ್ಯವನ್ನು ಹೇಗೆ ತಡೆಗಟ್ಟಬಹುದು. ಬ್ಯಾಡ್ ಟಚ್ ಅಂದರೇನು? ಗುಡ್ ಟಚ್ ಅಂದರೇನು? ಯಾರಾದಾರೂ ಬ್ಯಾಡ್ ಟಚ್ ಮಾಡಿದರೆ ಅದನ್ನು ಹೇಗೆ ಗುರುತಿಸಬೇಕು. ಅವುಗಳನ್ನು ತಡೆಗಟ್ಟಲು ಮಕ್ಕಳು ಏನು ಮಾಡಬೇಕು ಎಂಬುದರ ಮಾಹಿತಿ ಮಕ್ಕಳಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪೋಷಕರು ಇಲ್ಲದ ಮಕ್ಕಳನ್ನು ಗುರುತಿಸಿ, ಸರ್ಕಾರಿ ಬಾಲ ಮಂದಿರದಲ್ಲಿ ದಾಖಲಾತಿ ಪಡೆದುಕೊಳ್ಳಬೇಕು. ಅಂತಹ ಮಕ್ಕಳು ಕಂಡುಬಂದಲ್ಲಿ ಸರ್ಕಾರಿ ಬಾಲ ಮಂದಿರಕ್ಕೆ ನೋಂದಯಿಸಲು ಸಾರ್ವಜನಿಕರಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಶೋಷಣೆಗೆ ಒಳಗಾಗುವ ಮಹಿಳೆಯರ ಸಮಸ್ಯೆಗಳನ್ನು ಕೌನ್ಸಲಿಂಗ್ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು. ಈ ಕಾಯ್ದೆ ಬಗ್ಗೆ ಗ್ರಾಮಾಂತರ ಪ್ರದೇಶದ ಮಹಿಳೆಯರಲ್ಲಿ ಅರಿವು ಮೂಡಿಸಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಹಕಾರ ಪಡೆಯಬೇಕು. ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.