ಮೂರನೇ ಅಲೆಗೆ ಒಂದು ಲಕ್ಷ ಕೇಸ್ ಸಾಧ್ಯತೆ: ಬಳ್ಳಾರಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಹೇಳಿಕೆ

01082021 Bellary DC Prees meet
Published on

ಬಳ್ಳಾರಿ: ಕೋವಿಡ್ ಮೊದಲ, ಎರಡನೇ ಅಲೆಯಲ್ಲಿ ಕ್ರಮವಾಗಿ 30 ಮತ್ತು 60 ಸಾವಿರ ಪ್ರಕರಣಗಳು ಕಾಣಿಸಿಕೊಂಡಿದ್ದವು. ಸಂಭಾವ್ಯ 3ನೇ ಅಲೆಯಲ್ಲಿ ಒಂದು ಲಕ್ಷ ಕೇಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ಥಳೀಯ ಪರಿಸ್ಥಿತಿ ಆಧರಿಸಿ ನಿರ್ಧಾರ ಕೈಗೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದು, ಅದರನ್ವಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೋವಿಡ್ ಸಂಭಾವ್ಯ 3ನೇ ಅಲೆಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಬೆಡ್‌ಗಳು, ಔಷಧ ವ್ಯವಸ್ಥೆ, ಮನೆಮನೆ ಸಮೀಕ್ಷೆ, ಕರೊನಾ ನಿಯಮ ಕಟ್ಟುನಿಟ್ಟಿನ ಪಾಲನೆ, ನಿರ್ಬಂಧಗಳ ಪರಿಣಾಮಕಾರಿ ಜಾರಿ ಮಾಡುವುದು ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಮೂರನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷಕ್ಕೇರುವ ಸಾಧ್ಯತೆ ಇದೆ. ಸೂಕ್ತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ 20 ಸಾವಿರ ಕೋವಿಡ್ ಕಿಟ್, 15 ಸಾವಿರ ರೆಮ್‌ಡೆಸಿವಿರ್ ಲಸಿಕೆ ಸೇರಿ ಅಗತ್ಯ ಔಷಧ ಸಂಗ್ರಹವಿದೆ. ಬಳ್ಳಾರಿ ಜಿಲ್ಲಾಸ್ಪತ್ರೆ, ವಿಮ್ಸ್, ಟ್ರಾಮಾಕೇರ್, ಹೊಸಪೇಟೆ ಎಂಸಿಎಚ್ ಆಸ್ಪತ್ರೆ, ಹರಪನಹಳ್ಳಿ, ಹಡಗಲಿ ಸೇರಿದಂತೆ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆ, ವಿಮ್ಸ್, ಟ್ರಾಮಾಕೇರ್‌ಗಳಲ್ಲಿ ಐಸಿಯು ಬೆಡ್‌ಗಳ ಹೆಚ್ಚಳ ಮತ್ತು ಅಗತ್ಯ ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ಸೋಂಕಿತರಿಗಾಗಿ ತೋರಣಗಲ್‌ನ ಜಿಂದಾಲ್ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆ ಮುಂದುವರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಲಪಾಟಿ ತಿಳಿಸಿದರು.

ಕೋವಿಡ್ ಲಾಕ್‌ಡೌನ್ ತೆರವಾಗಿದೆ ಎಂದು ಜನರು ಸ್ಯಾನಿಟೈಸರ್, ಮಾಸ್ಕ್ ಬಳಕೆ, ದೈಹಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತಿದ್ದಾರೆ. ಕಡ್ಡಾಯ ಪಾಲನೆ ಕುರಿತು ಪೊಲೀಸ್, ಕಂದಾಯ, ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಮೂಡಿಸಲಾಗುವುದು. ಪರಿಸ್ಥಿತಿ ನೋಡಿಕೊಂಡು ಮುಂದಿನ ವಾರ ಗಡಿಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗುವುದು.| ಸೈದುಲು ಅದಾವತ್ ಎಸ್ಪಿ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net