ಬಳ್ಳಾರಿ ಕೋವಿಡ್ ಆಸ್ಪತ್ರೆಯಿಂದ ಮತ್ತೊಬ್ಬ ಬಿಡುಗಡೆ, ಉಳಿದ 5 ಜನರ ಆರೋಗ್ಯದಲ್ಲಿ ಚೇತರಿಕೆ

03052020 Bellary Covid Hospital-release
Published on

ಬಳ್ಳಾರಿ: ಕೋವಿಡ್ ಜಿಲ್ಲಾಸ್ಪತ್ರೆಯಿಂದ ಭಾನುವಾರ ಮತ್ತೊಬ್ಬ ಕರೊನಾ ಸೋಂಕಿತ ಗುಣಮುಖರಾದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಯಿತು. ಒಟ್ಟು 13 ಸೋಂಕಿತರ ಪೈಕಿ ಈವರೆಗೆ ಎಂಟು ಜನ ರೋಗ ಮುಕ್ತರಾಗಿದ್ದು, ಉಳಿದ ಐದು ಜನರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ.

ಈ ಮೊದಲು ಗುಣಮುಖರಾದ ರೋಗಿ ಸಂಖ್ಯೆ-89, ಪಿ-91 ಮತ್ತು ಪಿ-141 ನಂತರ ಪಿ-90 ಪಿ-151 ಬಿಡುಗಡೆ ಮಾಡಲಾಗಿತ್ತು. ಎರಡು ದಿನಗಳ ಹಿಂದೆ 21 ವರ್ಷದ ಪಿ-333 ಹಾಗೂ 24 ವರ್ಷದ ರೋಗಿ ಸಂಖ್ಯೆ-337 ರನ್ನು ಮನೆಗೆ ಕಳಿಸಲಾಗಿತ್ತು. ಭಾನುವಾರ ಗುಣಮುಖರಾದ ಹೊಸಪೇಟೆಯ ಪಿ-336ರನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯ ಮೊದಲ ಸೋಂಕಿತರ ಪ್ರಥಮ ಸಂಪರ್ಕಿತರಾಗಿದ್ದಾರೆ.

ಮನೆಯತ್ತ ತೆರಳಲು ಸಿದ್ಧರಾಗಿ ನಿಂತಿದ್ದ ಪಿ-336 ಅವರಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಅವರಿಗೆ ಪಡಿತರ ಕಿಟ್ ವಿತರಿಸಲಾಯಿತು. ಬಳಿಕ ಹೊರಬಂದ ಪಿ-336 ಅವರು ಭಾವುಕರಾದರು. ಆಸ್ಪತ್ರೆಗೆ ದಾಖಲಾದ ದಿನದಿಂದ ವೈದ್ಯ ಸಿಬ್ಬಂದಿ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ಕೊಡುವುದರ ಜತೆಗೆ ಆತ್ಮಸ್ಥೈರ್ಯ ತುಂಬಿ ಮಾನಸಿಕವಾಗಿ ಗಟ್ಟಿಗೊಳಿಸಿದರು. ಗುಣಮಟ್ಟ ಆಹಾರ ಒದಗಿಸಿದರು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಋಣವನ್ನು ನಾವೆಂದೂ ಮರೆಯುವುದಿಲ್ಲ ಎಂದರು.

ಕೋವಿಡ್ ನೋಡಲ್ ಅಧಿಕಾರಿ ಡಾ.ಮಲ್ಲಿಕಾರ್ಜುನ, ಡಾ.ಅನಿಲ್, ಡಾ.ಲಿಂಗರಾಜು, ಡಾ.ವಿಜಯ ಶಂಕರ್, ಡಾ.ಸುನೀಲ್, ಡಾ.ವಿನಯ್, ಡಾ.ಸುಜಾತಾ, ಶುಶ್ರೂಷಕರ ಅಧೀಕ್ಷಕಿ ಶಾಂತಾಬಾಯಿ, ಡಾ.ಚಿತ್ರಶೇಖರ್, ಡಾ.ಉಮಾ ಮಹೇಶ್ವರಿ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net