ಕೋವಿಡ್ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಹಿಸಿ- ಡಿಸಿ ಪವನ್‌ಕುಮಾರ್ ಮಾಲಪಾಟಿ ಸೂಚನೆ

281222 Ballari District Disaster Management Authority meeting
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಡಿಸಿ ಪವನ ಕುಮಾರ ಮಾಲಪಾಟಿ ಮಾತನಾಡಿದರು.
Published on

ಬಳ್ಳಾರಿ: ಕೋವಿಡ್‌ನ ನಾಲ್ಕನೇ ಅಲೆ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನ ಕುಮಾರ ಮಾಲಪಾಟಿ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಸೋಂಕು ನಿಯಂತ್ರಿಸಲು ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್‌ಗಳ ಗುಣಮಟ್ಟ ತಪಾಸಣೆ ಮಾಡಬೇಕು. ಬೆಡ್‌ಗಳು ಮತ್ತು ವೆಂಟಿಲೇಟರ್‌ಗಳ ಸ್ಟಾಕ್‌ಗಳ ಅಗತ್ಯತೆಯನ್ನು ಪರಿಶೀಲಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಜಿಂದಾಲ್ ಹಾಗೂ ಇತರೆ ಕಾರ್ಖಾನೆಗಳಿಗೆ ಹೊರ ರಾಜ್ಯದಿಂದ ಬರುವ ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚು ಕೋವಿಡ್ ತಪಾಸಣಾ ಕೇಂದ್ರಗಳನ್ನು ತೆರೆಯಬೇಕು. ಹೆಚ್ಚು ಜನರು ಸೇರುವ ಸಿನಿಮಾ ಮಂದಿರಗಳಲ್ಲಿ ಹಾಗೂ ಒಳಾಂಗಣಗಳಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ತಪ್ಪದೇ ಮಾಸ್ಕ್ ಧರಿಸುವಂತೆ ಸೂಚಿಸಬೇಕು. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಅಗತ್ಯತೆ, ಆಕ್ಸಿಜನ್ ಘಟಕಗಳು, ವೈದ್ಯಕೀಯ ವ್ಯವಸ್ಥೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೋವಿಡ್ ಪ್ರಕರಣಗಳಿಗೆ ಸಂಬಂಧಿಸಿದಂತೆ ರ‌್ಯಾಪಿಡ್ ಟೆಸ್ಟ್‌ಗಳನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ನೀರಿನಲ್ಲಿ ಕಾಲುಜಾರಿ ಬಿದ್ದು ಸಾವಿನ ಪ್ರಕರಣಗಳು ಹೆಚ್ಚು ಸಂಭವಿಸುತ್ತಿದ್ದು, ಜಿಲ್ಲೆಯ ಪ್ರಮುಖ ಕಾಲುವೆಗಳಾದ ತೋರಣಗಲ್ಲು, ಬಂಡಿಹಟ್ಟಿ, ಅಲ್ಲಿಪುರ ಕಾಲುವೆ ಬ್ರಿಡ್ಜ್‌ಗಳ ಕೆಳಗೆ ಗ್ರಿಲ್‌ಗಳನ್ನು ಆಳವಡಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಜಿ.ಲಿಂಗಮೂರ್ತಿ, ಸಹಾಯಕ ಆಯುಕ್ತ ಹೇಮಂತ್‌ಕುಮಾರ್.ಎನ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರೂಪಿಂದರ್ ಕೌರ್, ಎಡಿಸಿ ಮಂಜುನಾಥ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net