

ಬಳ್ಳಾರಿ: ಅವಳಿ ಜಿಲ್ಲೆಗಳಾದ ಬಳ್ಳಾರಿ ಮತ್ತು ವಿಜಯನಗರದಲ್ಲಿ ಸೋಮವಾರ 15ರಿಂದ 18ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕುವುದಕ್ಕೆ ಚಾಲನೆ ನೀಡಲಾಯಿತು.
ಪ್ರತಿ ತಾಲೂಕಿನಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಸಿರುಗುಪ್ಪ ತಾಲೂಕಿನಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಲಸಿಕಾ ಕಾರ್ಯಕ್ಕೆ ಚಾಲನೆ ನೀಡಿದರು. ಇತ್ತ ಬಳ್ಳಾರಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಉದ್ಘಾಟಿಸಿ, ನರೇಂದ್ರ ಮೋದಿ ಅವರ ಕನಸಿನ ಭಾರತ ನಿರ್ಮಾಣವಾಗಲು ಮಕ್ಕಳು ಲಸಿಕೆ ಹಾಕಿಸಿಕೊಳ್ಳಬೇಕು. ಕರೊನಾ ಓಡಿಸಲು ಲಸಿಕೆಯೇ ರಾಮಬಾಣವಾಗಿದೆ ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಕೋವಿಡ್ ವಿರುದ್ಧ್ದ ಗೆಲ್ಲಲು ನಮ್ಮ ಬಳಿ ಕರೊನಾ ನಿಯಮ ಪಾಲನೆ ಮತ್ತು ಲಸಿಕೆ ಎಂಬ ಎರಡು ಅಸ್ತ್ರಗಳಿವೆ. ಹೀಗಾಗಿ, ಲಸಿಕೆ ಹಾಕಿಸಿಕೊಂಡು ಕೋವಿಡ್ ನಿಯಮ ಪಾಲನೆ ಮಾಡಬೇಕು. ಜತೆಗೆ ನಿಮ್ಮ ಸುತ್ತ್ತಲಿನ ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ತಿಳಿ ಹೇಳಬೇಕು ಎಂದರು.
ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರ್‌ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ, ಟಿಎಚ್‌ಒ ಮೋಹನ್‌ಕುಮಾರಿ, ಡಿಡಿಪಿಯು ಎ.ರಾಜು, ಡಿಡಿಪಿಐ ಸಿ.ರಾಮಪ್ಪ, ಬಿಇಒ ಸಿದ್ದಲಿಂಗಯ್ಯ, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ವೀರಶೇಖರರೆಡ್ಡಿ ಸೇರಿ ಇತರರಿದ್ದರು.