ಚೇತರಿಸಿಕೊಂಡ ಹತ್ತಿ ಉದ್ಯಮ

Published on

ಬಳ್ಳಾರಿ ; ಕಳೆದ ಒಂದು ತಿಂಗಳಿಂದ ನಗರದ ಕಾಟನ್ ಮಿಲ್‌ಗಳಿಗೆ ನಿತ್ಯ ಎರಡೂವರೆ ಸಾವಿರಕ್ಕೂ ಅಧಿಕ ಕ್ವಿಂಟಾಲ್ ಹತ್ತಿ ಪೂರೈಕೆಯಾಗುತ್ತಿದ್ದು ಉದ್ಯಮ ಚೇತರಿಸಿಕೊಳ್ಳುವತ್ತ ಸಾಗಿದೆ.

ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿತ್ತು. ಆದರೆ, ಕಲಬೆರೆಕೆ ಬಿತ್ತನೆ ಬೀಜ ಮಾರಾಟ, ಅತಿಯಾದ ಕೀಟನಾಶಕ ಬಳಕೆ, ಕಾಯಿಗೆ ಕೀಟಗಳ ಬಾಧೆ, ರಸಗೊಬ್ಬರ ದರ ದುಬಾರಿಯಾಗಿರುವುದರಿಂದ ಹೂಡಿದ ಬಂಡವಾಳ ವಾಪಸ್ ಬಾರದೆ ರೈತರು ಹತ್ತಿ ಬೆಳೆಯಲು ನಿರಾಸಕ್ತಿ ವಹಿಸಿ ಬಿಳಿ ಜೋಳ, ಮೆಣಸಿಕಾಯಿ ಸೇರಿದಂತೆ ಇತರೆ ಬೆಳೆ ಬೆಳೆಯಲು ಆಸಕ್ತಿವಹಿಸಿದರು.

ಸದ್ಯ ಚಿತ್ರದುರ್ಗ ಜಿಲ್ಲೆಯ ರಾಂಪುರ, ಜಿಲ್ಲೆಯ ಗಡಿಭಾಗ ಹಾಗೂ ನೆರೆಯ ಆಂಧ್ರದ ಕಣೇಕಲ್, ಹೊಳಗುಂದ ಮಂಡಲ ಸೇರಿದಂತೆ ವಿವಿಧಡೆ ಗ್ರಾಮಗಳಲ್ಲಿ ಬೋರೆವೆಲ್ ಹಾಗೂ ಪಂಪ್‌ಸೆಟ್‌ಗಳಿಗೆ ಅವಲಂಬಿತರಾಗಿ ನೂರರು ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಬೇಸಿಗೆಯಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಎಕರೆಗೆ ಹದಿನೈದರಿಂದ ಇಪ್ಪತ್ತ ಕ್ವಿಂಟಾಲ್ ಇಳುವರಿ ಬಂದಿದೆ. ಹತ್ತಿ ಬೆಲೆ ಕ್ವಿಂಟಾಲ್‌ಗೆ 7200 ರಿಂದ 7600 ರೂ. ಇದೆ. ನಿತ್ಯ ಎರಡೂವರೆ ಸಾವಿರ ಕ್ವಿಂಟಾಲ್ ಹತ್ತಿ ಕಾಟನ್‌ಮಿಲ್‌ಗಳಿಗೆ ಪೂರೈಕೆಯಾಗುತ್ತಿದೆ.

40 ಕಾಟನ್‌ಮಿಲ್‌ಗಳು ಚೇತರಿಕೆ : ನಗರದಲ್ಲಿ ಕೆಲ ವರ್ಷದ ಹಿಂದೆ 62 ಕಾಟನ್ ಮಿಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದವು. ವರ್ಷದಿಂದ ವರ್ಷಕ್ಕೆ ಹತ್ತಿ ಬೆಳೆಗಾರರು ಕ್ಷೀಣಿಸುತ್ತಿದ್ದಂತೆ ಮಿಲ್‌ಗಳಿಗೆ ಕಾಟನ್ ಪೂರೈಕೆ ಕೊರತೆಯಿಂದ 56 ಮಿಲ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಯಿತು. ಬಳಿಕ ಕೆಲ ತಿಂಗಳವರೆಗೆ ನಾಲ್ಕೈದು ಕಾಟನ್ ಮಿಲ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಸದ್ಯ ಕಳೆದ ಒಂದು ತಿಂಗಳಿಂದ ಹತ್ತಿ ಪೂರೈಕೆ ಹೆಚ್ಚುತ್ತಿರುವುದರಿಂದ 40 ಕಾಟನ್ ಮಿಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದು ಎಪ್ಪತ್ತ ರಿಂದ ಎಂಬತ್ತು ಸಾವಿರ ಹತ್ತಿ ಬೇಲ್ (ಒಂದು ಬೇಲ್ 175 ಕೆಜಿಗೆ ಸಮ) ಸಂಗ್ರಹವಾಗುತ್ತಿದೆ. ನೆರೆಯ ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ನಿತ್ಯ 900 ಕ್ವಿಂಟಾಲ್ ಬೇಲ್‌ಗಳು ರಪ್ತುಗೊಳ್ಳುತ್ತಿವೆ. ಹತ್ತಿ ಉದ್ಯಮವನ್ನೇ ನಂಬಿದ್ದ ಮೂರು ಸಾವಿರ ಕೂಲಿ ಕಾರ್ಮಿಕರು ಹಾಗೂ ಉದ್ದಿಮೆದಾರರು ಕೊಂಚ ನಿರಾಳಗೊಂಡಿದ್ದಾರೆ.

5.80 ಲಕ್ಷ ಪ್ಯಾಕೆಟ್ ಬೀಜ ಮಾರಾಟ : ಕಳೆದ ವರ್ಷ ತುಂಗಭದ್ರ ಜಲಾಶಯದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಭಾಗದ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದು ನಷ್ಟ ಹೊಂದಿ ಸಾಲದ ಸುಳಿಗೆ ಸಿಲುಕಿದ್ದರು. ಆದ್ದರಿಂದ, ಈ ಬಾರಿ ಮೆಣಸಿನಕಾಯಿ ಬದಲಾಗಿ ಹತ್ತಿ ಬೆಳೆಯಲು ಆಸಕ್ತಿವಹಿಸಿದ್ದಾರೆ. ಸದ್ಯ ಕೃಷಿ ಇಲಾಖೆಯು ಮುಂಗಾರಿನಲ್ಲಿ ಹತ್ತು ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯ ಗುರಿ ನಿರೀಕ್ಷೆ ಹೊಂದಿದೆ. ಜಿಲ್ಲೆಯ ಹಾಗೂ ನೆರೆಯ ಆಂಧ್ರದ ಗಡಿಭಾಗದಿಂದ ಮುಂಗಾರಿನಲ್ಲಿ ಹತ್ತಿ ಬೆಳೆಯುವ ಸಲುವಾಗಿ ಈಗಾಗಲೇ ರೈತರು ಮಾರುಕಟ್ಟೆಗಳಲ್ಲಿ ವಿವಿಧ ತಳಿಯ 5.80 ಲಕ್ಷ ಪ್ಯಾಕೇಟ್ ಬೀಜಗಳು ಖರೀದಿಸಿದ್ದಾರೆ ಎನ್ನಲಾಗಿದೆ. ಆದ್ದರಿಂದ, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಕಾಟನ್ ಮಿಲ್‌ಗಳಿಗೆ ಇನ್ನೂ ಹತ್ತಿ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುವ ನಿರೀಕ್ಷೆಯಿದೆ.

ಬಾಕ್ಸ್ : ಜಲಾಶಯದಿಂದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗೆ ಹರಿಸಿದ್ದರಿಂದ ಭತ್ತ ನಾಟಿ ಚುರುಕು ಪಡೆದುಕೊಂಡಿದೆ. ಆದ್ದರಿಂದ, ಹತ್ತಿ ಕೀಳಲು ಕೂಲಿ ಕಾರ್ಮಿಕರು ಕೊರತೆಯಿದೆ. ಮಳೆ ಸುರಿದರೆ ಹತ್ತಿ ಹಾಳಾಗಲಿದೆ ಎಂಬ ಉದ್ದೇಶದಿಂದ ಕೂಲಿ ಕಾರ್ಮಿಕರಿಗೆ ಹತ್ತಿ ಕೀಳಲು ಕೆಜಿ ಗೆ ಹತ್ತು ರೂ. ದರ ನಿಗದಿಗೊಳಿಸಿದ್ದಾರೆ.

ಕೋಟ್... ನಗರದ ಕಾಟನ್ ಮಿಲ್‌ಗಳಿಗೆ ಹತ್ತಿ ಪೂರೈಕೆಯಿಲ್ಲದೆ ಬಹುತೇಕ ಕಾಟನ್ ಮಿಲ್‌ಗಳು ಬಂದ್‌ಯಾಗಿದ್ದವು. ಕಳೆದ ಒಂದು ತಿಂಗಳಿಂದ ನಿಧಾನಗತಿಯಲ್ಲಿ ಹತ್ತಿ ಪೂರೈಕೆಯಲ್ಲಿ ಹೆಚ್ಚುತ್ತಿದ್ದು ಉದ್ಯಮ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

- ದಂಡಿನ ತಿಪ್ಪೇಸ್ವಾಮಿ, ಅಧ್ಯಕ್ಷ, ಕಾಟನ್ ಮಿಲ್ ಅಸೋಸಿಯೇಷನ್, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net