ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

Published on

ಬಳ್ಳಾರಿ : ಇಲ್ಲಿನ ಮಹಾನಗರ ಪಾಲಿಕೆಯ ತೆರಿಗೆ, ಕರ, ಶುಲ್ಕ ಹಾಗೂ ದಂಡ ಸಂಗ್ರಹದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆದಿದೆ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಸಿ.ಇಬ್ರಾಹಿಂ ಬಾಬು ಆರೋಪಿಸಿದರು.

ನಗರದ ಸೋಮವಾರ ಹಮ್ಮಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ನಗರದಲ್ಲಿ ಐದು ಲಕ್ಷಕ್ಕೂ ಅಧಿಕ ಜನ ವಾಸಿಸುತ್ತಿದ್ದು, ಎಲ್ಲರಿಗೂ ಮೂಲಭೂತ ಸೌಕರ್ಯ ಒದಗಿಸುವುದು ಪಾಲಿಕೆ ಜವಾಬ್ದಾರಿಯಾಗಿದೆ. ಆದರೆ, ಆದಾಯದ ಮೂಲಗಳಲ್ಲೇ ಭ್ರಷ್ಟಾಚಾರ ನಡೆದರೆ, ಇದು ಪಾಲಿಕೆಯ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾತ್ರವಲ್ಲ ಜನರಿಗೆ ಮಾಡುವ ವಂಚನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಕಲಿ ಬಿಲ್‌ಗಳನ್ನು ನೀಡಿ ತೆರಿಗೆದಾರರಿಗೆ, ಸಾರ್ವಜನಿಕರಿಗೆ, ಪಾಲಿಕೆಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಮತ್ತು ಮಹಾನಗರ ಪಾಲಿಕೆಗಳಿಗೆ ಆದಾಯ ಬರುವುದು ಮಳಿಗೆಗಳ ಬಾಡಿಗೆ, ತೆರಿಗೆ, ಕರ, ಶುಲ್ಕ ಮತ್ತು ದಂಡ ಸಂಗ್ರಹದಿಂದ ಎಂಬುವುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು. ಪಾಲಿಕೆಯ ಕೆಳ ಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಮೇಲಿನವರೆಗೆ ಪಾತ್ರ ಇರಬಹುದು. ಈ ಬಗ್ಗೆ ನಿಷಪಕ್ಷಪಾತ ತನಿಖೆಯಾಗಬೇಕು. ನಕಲಿ ಬಿಲ್ ಭ್ರಷ್ಟಾಚಾರದ ಬಗ್ಗೆ ಪಾಲಿಕೆ ಆಯುಕ್ತರಿಗೆ ತಿಳಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ತಪ್ಪು ಮಾಡದ ಕೆಳ ಹಂತದ ಅಮಾಯಕರನ್ನು ಸಿಕ್ಕಿಸುವ ಪ್ರಯತ್ನ ನಡೆಯುತ್ತಿದೆ. ಪಾಲಿಕೆ ಆಯುಕ್ತರು ನಕಲಿ ಬಿಲ್ ಸೃಷ್ಟಿಸುತ್ತಿರುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಪಾಲಿಕೆ ಸದಸ್ಯರಾದ ಟಿ.ಶ್ರೀನಿವಾಸ್ ಮೋತ್ಕರ್, ಕೆ.ಎಸ್.ಆಶೋಕ ಕುಮಾರ, ಎಸ್.ಸುರೇಖಾಗೌಡ, ಜಿ.ಹನುಮಂತ, ಕೆ.ಹನುಮಂತಪ್ಪ, ಪಿ.ಕಲ್ಪನಾ, ಎಂ.ಗೋವಿದರಾಜುಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net