ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿಯ ಮೊದಲನೆಯ ಸೆಮಿಸ್ಟರ್‌ನ ‘ಸೌರಭ’ ಪಠ್ಯಗಳಲ್ಲಿ ಸಾಕಷ್ಟು ದೋಷಗಳಿದ್ದು, ತಕ್ಷಣವೇ ಸರಿಪಡಿಸಿ ತಪ್ಪಿಸ್ತರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಿವಿ ಕುಲಪತಿಗಳಿಗೆ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಶನಿವಾರ ಮನವಿ ಸಲ್ಲಿಸಿದರು.
ವಿವಿಯ ಬಿಎ ಪದವಿಯ ಪ್ರಥಮ ಸೆಮಿಸ್ಟರ್‌ನ ಸಾಮಾನ್ಯ ಕನ್ನಡದ ‘ಕಲಾ ಸೌರಭ’, ಬಿಕಾಂ ಮತ್ತು ಬಿಬಿಎ ಪದವಿಯ ಮೊದಲ ಸೆಮಿಸ್ಟರ್ನ ‘ವಾಣಿಜ್ಯ ಸೌರಭ’ ಹಾಗೂ ಬಿಎಸ್ಸಿ - ಬಿಸಿಎ ಪದವಿಯ ಮೊದಲ ಸೆಮಿಸ್ಟರ್‌ನ ‘ವಿಜ್ಞಾನ ಸೌರಭ’ ಪಠ್ಯಗಳನ್ನು ವಿಶ್ವವಿದ್ಯಾಲಯದ ಪ್ರಸಾರಾಂಗವೇ ಪ್ರಕಟಿಸಿದೆ. ಈ ಪಠ್ಯಗಳಲ್ಲಿ ಮುದ್ರಣ ಹಾಗೂ ಮಾಹಿತಿಯ ಸಾಕಷ್ಟು ದೋಷಗಳಿವೆ ಎಂದು ದೂರಿದ್ದಾರೆ. ಅಲ್ಲದೇ, ಪಠ್ಯ ಪುಸ್ತಕಗಳಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳ ಹೆಸರನ್ನೇ ತಪ್ಪಾಗಿ ಮುದ್ರಿಸಲಾಗಿದೆ. ಇವುಗಳನ್ನು ಗಮನಿಸಿದಾಗ ಪಠ್ಯ ಪುಸ್ತಕ ಮುದ್ರಣ ಅಥವಾ ರಚನಾ ಸಮಿತಿಯಲ್ಲಿ ಇರುವ ನಿರ್ಲಕ್ಷೃ - ಬೇಜವಾಬ್ದಾರಿಗಳು ಅಥವಾ ಅತಿಯಾದ ಆತ್ಮವಿಶ್ವಾಸಗಳೇ ಕಾರಣವಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿವೆ. ಕಾರಣ ತಪ್ಪು ಮತ್ತು ದೋಷಪೂರಿತ ಪಠ್ಯಗಳ ಮುದ್ರಣಕ್ಕೆ ಕಾರಣ ಆಗಿರುವವರನ್ನು ತಕ್ಷಣವೇ ಪತ್ತೆ ಮಾಡಿ, ಕಾನೂನಿನ ವ್ಯಾಪ್ತಿಯಲ್ಲಿ ಶಿಕ್ಷಿಸಬೇಕು ಎಂದು ಸತೀಶ್ ಆಗ್ರಹಿಸಿದ್ದಾರೆ.
ತಪ್ಪಾಗಿ - ದೋಷಪೂರ್ಣವಾಗಿರುವ ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಂದ ಹಿಂದಕ್ಕೆ ಪಡೆಯಬೇಕು. ಪಠ್ಯಗಳನ್ನು ಓದುವಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಗೊಂದಲ - ಮಾನಸಿಕ ಹಿಂಸೆ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಕುಲಪತಿಗಳಿಗೆ ಕೋರಿದ್ದಾರೆ.