ಮೂರನೇ ಅಲೆ ತಡೆಗೆ ಸಕಲ ಸಿದ್ಧತೆ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿಕೆ

Minister Anand Singh
Published on

ಬಳ್ಳಾರಿ: ಕರೊನಾ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ತಜ್ಞರ ವರದಿ ಆಧರಿಸಿ ಚಿಕಿತ್ಸೆ ನೀಡಲು ಮಕ್ಕಳಿಗಾಗಿಯೇ 50 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುತ್ತಿದೆ. ತಾಲೂಕು ಕೇಂದ್ರಗಳಲ್ಲಿ 5 ರಿಂದ 10 ವೆಂಟಿಲೇಟರ್‌ಗಳ ಸಿದ್ಧತೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವ ಆನಂದಸಿಂಗ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆಕ್ಸಿಜನ್ ಬೆಡ್‌ಗಳಿಗಾಗಿ ಮಕ್ಕಳಿಗಾಗಿ 500 ರಿಂದ ಒಂದು ಸಾವಿರ ಮಾಸ್ಕ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, 10 ದಿನದೊಳಗೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ಹೊಸದಾಗಿ 25 ವೆಂಟಿಲೇಟರ್‌ಗಳು ಬಂದಿದ್ದು, ಅವುಗಳಲ್ಲಿ 10 ಜಿಲ್ಲಾಸ್ಪತ್ರೆ, 10 ವಿಮ್ಸ್ ಹಾಗೂ 5 ಜಿಂದಾಲ್ ಆಸ್ಪತ್ರೆಯಲ್ಲಿ ಅಳವಡಿಸಲು ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ವೆಂಟಿಲೇಟರ್ ಬೆಡ್‌ಗಳ ಕೊರತೆ ಇದೆ ಎನ್ನುವ ಆತಂಕ ಬೇಡ ಎಂದರು.

ಕೋವಿಡ್ ನಿಯಂತ್ರಿಸಲು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಈಗಾಗಲೇ ವಿಧಿಸಲಾಗಿರುವ ಸಂಪೂರ್ಣ ಲಾಕ್‌ಡೌನ್ ಆದೇಶವನ್ನು ಜೂ.7ರವರೆಗೆ ವಿಸ್ತರಿಸಲಾಗಿದೆ. ಮೇ 31 ಮತ್ತು ಜೂ.1ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಎಸ್ಪಿ ಸೈದುಲು ಅದಾವತ್, ಡಿಎಚ್‌ಒ ಡಾ.ಜನಾರ್ದನ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ವಿಮ್ಸ್ ನಿರ್ದೇಶಕ ಗಂಗಾಧರಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net