

ಬಳ್ಳಾರಿ: ಜಿಲ್ಲೆಗೆ ಕರೊನಾ ರೂಪಾಂತರಿಯ ಆತಂಕ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತ ಬೆಡ್ ವ್ಯವಸ್ಥೆ ಮಾಡುತ್ತಿದೆ. ಪರಿಸ್ಥಿತಿ ನಿಭಾಯಿಸಲು ಎಚ್ಚರಿಕೆ ನಡೆಯಿಟ್ಟಿರುವ ಆಡಳಿತ, ವಿಮ್ಸ್ ಹಾಗೂ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ವೈದ್ಯಕೀಯ ಮಹಾವಿದ್ಯಾಲಯದ ಡೆಂಟಲ್ ಕಾಲೇಜಿನಲ್ಲಿ ಹೊಸ 180 ಆಕ್ಸಿಜನ್ ಬೆಡ್ ನಿರ್ಮಾಣ ಮಾಡಲಾಗಿದೆ. ಇನ್ನೂ ಮಕ್ಕಳಿಗಾಗಿಯೇ ಪ್ರತ್ಯೇಕ ವಾರ್ಡ್ ಹಾಗೂ ಅದರಲ್ಲಿ ಬೇಕಾದ ಹೆಚ್ಚುವರಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.ಅಲ್ಲದೆ, ಕಳೆದ ಎರಡು ಅಲೆಯಲ್ಲಿ ಎಡವಿದಂತೆ ಈ ಬಾರಿ ಜಾಗೃತಿ ವಹಿಸಿ, ಸಾರ್ವಜನಿಕರ ಆರೋಗ್ಯ ರಕ್ಷಣೆಯ ಜಿಲ್ಲಾಡಳಿತ ನಿಗಾ ಇಟ್ಟಿದೆ. ಆದರೆ, ಇತ್ತ ಅವಳಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 100ರ ಗಡಿ ದಾಟಿದ್ದು, ಜನತೆ ಮುಂಜಾಗ್ರತಾ ಕ್ರಮ ವಹಿಸುವುದು ಅತ್ಯವಶ್ಯವಾಗಿದೆ. ಪ್ರತಿ ದಿನ ಶೂನ್ಯ, ಒಂದು ಇಲ್ಲವೆ ಎರಡು ಕೇಸ್‌ಗಳು ದಾಖಲಾಗುತ್ತಿದ್ದವು. ಆದರೀಗ, ದಿನದಿಂದ ದಿನಕ್ಕೆ 3ರಿಂದ 5ರಂತೆ ಸೋಂಕಿತರ ಸಂಖ್ಯೆ ಏರುಮುಖದಲ್ಲಿದೆ. ಒಟ್ಟು 121 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 97,814 ಜನರಿಗೆ ಕೋವಿಡ್ ತಗುಲಿದೆ. ಈ ಪೈಕಿ 96,007ಜನರು ಗುಣಮುಖರಾಗಿದ್ದಾರೆ. 1686ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ.
ಕರೊನಾ ಮುಂಜಾಗ್ರತಾ ಕ್ರಮವಾಗಿ ವಿಮ್ಸ್‌ನಲ್ಲಿ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕಳೆದ ಬಾರಿ ಬೆಡ್ ಸಿಗದೆ ರೋಗಿಗಳು ಪರದಾಡುವಂತಾಗಿತ್ತು. ಹೀಗಾಗಿ ಈ ಬಾರಿ ಎಚ್ಚೆತ್ತು, ಆಕ್ಸಿಜನ್ ಬೆಡ್ ಸೇರಿದಂತೆ ಹೆಚ್ಚಿನ ಮಟ್ಟದಲ್ಲಿ ನಾರ್ಮಲ್ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ.| ಗಂಗಾಧರಗೌಡ, ನಿರ್ದೇಶಕ, ವಿಮ್ಸ್, ಬಳ್ಳಾರಿ
ಆಫ್ರಿಕಾದಿಂದ ಬಂದವರ ವರದಿ ನೆಗೆಟಿವ್
ಹೊಸಪೇಟೆ: ಪಶ್ಚಿಮ ಆಫ್ರಿಕಾದ ಗಿನಿ ದೇಶದಿಂದ ನಗರಕ್ಕೆ ಬಂದಿದ್ದ ಇಬ್ಬರ ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದು ಡಿಸಿ ಅನಿರುದ್ಧ್ ಶ್ರವಣ್ ತಿಳಿಸಿದರು. ಯಾರೂ ಆತಂಕಪಡುವ ಅಗತ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಒಂದು ವಾರದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಬಳಿಕ ಮಾರ್ಗಸೂಚಿ ಉಲ್ಲಂಘಿಸುವುದು ಕಂಡು ಬಂದಲ್ಲಿ ದಂಡ ವಿಧಿಸಲು ಕ್ರಮವಹಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
10.97 ಕೋಟಿ ರೂ. ಬೆಳೆ ನಷ್ಟ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ವಿಜಯನಗರ ಜಿಲ್ಲೆಯಲ್ಲಿ 10.97 ಕೋಟಿ. ರೂ. ನಷ್ಟವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. 993 ಹೆಕ್ಟೇರ್ ಭತ್ತ, 407 ಹೆ. ರಾಗಿ, 358 ಹೆ. ಮುಸುಕಿನ ಜೋಳ, 411 ಹೆ. ಶೇಂಗಾ, 167 ಹೆ. ಟೊಮ್ಯಾಟೊ, 5667 ಹೆ. ಮೆಣಸಿನಕಾಯಿ, 727 ಹೆ. ಈರುಳ್ಳಿ, 1403 ಹೆ. ಇತರ ತರಕಾರಿ ಬೆಳೆ ನಷ್ಟವಾಗಿದೆ ಎಂದು ಮಾಹಿತಿ ನೀಡಿದರು.