ಬಳ್ಳಾರಿ ಜಿಲ್ಲೆ ಶೀಘ್ರ ಕರೊನಾ ಮುಕ್ತ, ಉಸ್ತುವಾರಿ ಸಚಿವ ಆನಂದ್ ಸಿಂಗ್ ವಿಶ್ವಾಸ

26042020 Bellary Minister Anandsingh Meeting
Published on

ಬಳ್ಳಾರಿ: ಕರೊನಾ ವಿಚಾರದಲ್ಲಿ ಜಿಲ್ಲೆ ರೆಡ್‌ರೆನ್‌ನಲ್ಲಿದೆ. ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಶೀಘ್ರ ಜಿಲ್ಲೆ ಕರೊನಾ ಮುಕ್ತವಾಗುವ ವಿಶ್ವಾಸ ಇದೆ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಿಂದ ವಲಸೆ ಹೋಗಿದ್ದ ಸುಮಾರು 30 ಸಾವಿರ ಕಾರ್ಮಿಕರು ವಾಪಸ್ ಬಂದಿದ್ದಾರೆ. ಈ ಕಾರ್ಮಿಕರ ಬಗ್ಗೆ ನಿಗಾ ವಹಿಸಬೇಕು. ಕೆಮ್ಮು, ಶೀತ ಹಾಗೂ ಜ್ವರದ ಲಕ್ಷಣಗಳು ಕಂಡುಬಂದರೆ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಅಂಜೂರ, ಬಾಳೆಹಣ್ಣು, ಸಪೋಟಾ, ಪಪ್ಪಾಯ, ಸೀಬೆ ಸೇರಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವ ರೈತರು ಲಾಕ್‌ಡೌನ್‌ದಿಂದಾಗಿ ತೊಂದರೆಗೆ ಸಿಲುಕಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಸಮನ್ವಯ ಸಾಧಿಸಿ ನೆರವಾಗಬೇಕು. ರೈತರು ಮತ್ತು ದಾನಿಗಳ ನಡುವೆ ಸಂಪರ್ಕ ಕಲ್ಪಿಸಿ ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಕುಂಟುನೆಪ ಹೇಳಿ ಸುಮ್ಮನೆ ಕುಳಿತುಕೊಂಡರೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಏಪ್ರಿಲ್‌ನಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ ಹಾಗೂ ಗಾಳಿಯಿಂದ 3921.11 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಎನ್‌ಡಿಆರ್‌ಎಫ್ ನಿಯಮಗಳಂತೆ ಇದು 2543.01 ಹೆಕ್ಟೇರ್ ಆಗಲಿದೆ. ಸಿರಗುಪ್ಪ ತಾಲೂಕಿನಲ್ಲಿ ಅತಿ ಹೆಚ್ಚಿನ 2039.27 ಹೆಕ್ಟೇರ್ ಬೆಳೆ ನಾಶವಾಗಿದೆ. 3068 ರೈತರು ಬೆಳೆ ನಷ್ಟ ಹೊಂದಿದ್ದು ಮುಂದಿನ ವಾರ 3.5 ಕೋಟಿ ರೂ. ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗಲಿದೆ ಎಂದು ಸಚಿವ ಆನಂದಸಿಂಗ್ ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೆ 3.29 ಲಕ್ಷ ಲೀಟರ್ ಹಾಲನ್ನು ಉಚಿತವಾಗಿ ವಿತರಿಸಲಾಗಿದೆ ಎಂಬುದು ಸೇರಿ ಕರೊನಾಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾಹಿತಿ ನೀಡಿದರು. ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಜಿ.ಸೋಮಶೇಖರ ರೆಡ್ಡಿ,ನಾಗೇಂದ್ರ, ಎಂ.ಎಸ್.ಸೋಮಲಿಂಗಪ್ಪ, ಅಲ್ಲಂ ವೀರಭದ್ರಪ್ಪ, ಜಿಪಂ ಸಿಇಒ ಕೆ.ನಿತೀಶ, ಎಸ್ಪಿ ಸಿ.ಕೆ.ಬಾಬಾ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net