ಜೋಳದ ಮಿತಿ ರೈತರಿಗೆ ಸಂಕಷ್ಟ

Published on

ಬಳ್ಳಾರಿ ; ರಾಜ್ಯದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಜೋಳವನ್ನು ಕೇವಲ ಒಂದು ಲಕ್ಷ ಮೆಟ್ರಿಕ್ ಟನ್ ಖರೀದಿಸಲು ಸರ್ಕಾರ ಆದೇಶಿಸಿದ ಮಿತಿ ಪೂರ್ಣಗೊಂಡಿರುವುದು ರೈತರಿಗೆ ಮತ್ತೋಮ್ಮೆ ಸಂಕಷ್ಟ ತಂದಿದೆ.

ಬಳ್ಳಾರಿ, ವಿಜಯನಗರ ಹಾಗೂ ರಾಯಚೂರು ಸೇರಿ ರಾಜ್ಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬೆಳೆಯುವ ಜಿಲ್ಲೆಗಳಾಗಿವೆ. ಆರಂಭದಲ್ಲಿ ಎಕರೆಗೆ ಹತ್ತು ಕಿಂಟ್ವಾಲ್ ಖರೀದಿಸುವ ಬಗ್ಗೆ ಆದೇಶ ಹೊರಡಿಸಿದ್ದರು. ರೈತರು ಪ್ರತಿಭಟನೆ ಹಮ್ಮಿಕೊಂಡ ಹಿನ್ನೆಲೆ ಹೋರಾಟ ಮಣಿದು ಎಕರೆ ಇಪ್ಪತ್ತು ಕಿಂಟ್ವಾಲ್ ಹಾಗೂ ಒಬ್ಬರಿಗೆ 150 ಕಿಂಟ್ವಾಲ್ ಖರೀದಿಸುವಂತೆ ಸರ್ಕಾರ ಮಿತಿ ಹೇರಿತು. ಪ್ರಸ್ತಕ ಸಾಲಿನ ಮುಂಗಾರಿನಲ್ಲಿ ಬಳ್ಳಾರಿ 3.60 ಲಕ್ಷ ಕಿಂಟ್ವಾಲ್ ಖರೀದಿಸಲು ರೈತರು ನೊಂದಣಿ ಮಾಡಿಕೊಂಡಿದ್ದರು. ಈಗಾಗಲೇ ಖರೀದಿ ಕೇಂದ್ರದಲ್ಲಿ ಒಟ್ಟಾರೆ 2.78 ಲಕ್ಷ ಕಿಂಟ್ವಾಲ್ ಜೋಳ ಖರೀದಿಸಿದ್ದು ಉಳಿದ 82 ಸಾವಿರ ಕಿಂಟ್ವಾಲ್ ಖರೀದಿಸುವ ಮುನ್ನವೇ ಖರೀದಿ ತಂತ್ರಾಂಶ ಸ್ಥಗಿತಗೊಂಡಿದೆ. ಅದರಂತೆ ನೆರೆಯ ರಾಯಚೂರು 1.60 ಲಕ್ಷ ಕಿಂಟ್ವಾಲ್ ಹಾಗೂ ವಿಜಯನಗರ 20 ಸಾವಿರ ಕಿಂಟ್ವಾಲ್ ಸೇರಿದಂತೆ ಒಟ್ಟಾರೆ ಮೂರು ಜಿಲ್ಲೆಗಳಲ್ಲಿ 2.62 ಲಕ್ಷ ಕಿಂಟ್ವಾಲ್ ಖರೀದಿಯಾಗದೆ ಉಳಿದಿದೆ.

ಆಪ್‌ಡೇಟ್ ಆಗದ ತಂತ್ರಾಂಶ : ಸರ್ಕಾರ ಮುಂಗಾರಿನಲ್ಲಿ ಜೋಳದ ಖರೀದಿಗೆ ಎಕರೆಗೆ 10 ಕಿಂಟ್ವಾಲ್ ಖರೀದಿಸಲು ಆದೇಶಿಸಿತ್ತು. ಬಳಿಕ ರೈತರ ಹೋರಾಟಕ್ಕೆ ಮಣಿದು ಹೆಚ್ಚುವಾರಿಯಾಗಿ ಇನ್ನೂ ಹತ್ತು ಕಿಂಟ್ವಾಲ್ ಹೆಚ್ಚಿಸಿತು. ಆದರೆ, ಪ್ರಾರಂಭದಲ್ಲಿ ಆದೇಶಿಸಿದ್ದ ಮಿತಿಗೆ ಮಾತ್ರ ಖರೀದಿ ತಂತ್ರಾಂಶದಲ್ಲಿ ಆಪ್‌ಡೇಟ್‌ಯಾಗಿದ್ದು, ಹೆಚ್ಚುವಾರಿಯಾಗಿ ಆದೇಶಿಸಿದ ಆಪ್‌ಡೇಟ್‌ಯಾಗದೆ ಇರುವುದರಿಂದ ಖರೀದಿ ತಂತ್ರಾಂಶ ಏಕಾಏಕಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುಂದಿನ ಸೂಚನೆವರೆಗೂ ಭೌತಿಕ ಖರೀದಿ ಪ್ರಕ್ರಿಯೆ ತುರ್ತಾಗಿ ಸ್ಥಗಿತಗೊಳಿಸಿ ಹಾಗೂ ಗ್ರೈನ್‌ವೋಚರ್ ಇಲ್ಲದೆ ಖರೀದಿ ಮಾಡಿ ದಾಸ್ತಾನು ಮಾಡಿಕೊಂಡಿದ್ದಲ್ಲಿ ಮುಂದಿನ ದಿನಗಳಲ್ಲೇ ರೈತರಿಗೆ ಹಣ ಜಮೆಯಾಗದೆ ಇದ್ದಲ್ಲಿ ಸಂಬಂಧಿಸಿದ ಖರೀದಿ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತಾರೆ ಎಂದು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಪ್ರಧಾನ ವ್ಯವಸ್ಥಾಪಕರು ಆದೇಶ ಹೊರಡಿಸಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಮೊಳಕೆ ಒಡೆದ ಜೋಳ : ರಾಜ್ಯದ ವಿವಿಧಡೆ ಕಳೆದ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದೆ. ಮುಂಗಾರಿನಲ್ಲಿ ನೊಂದಣಿಸಿಕೊಂಡ ರೈತರು ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ವಿವಿಧಡೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಬಾಡಿಗೆ ಟ್ರಾೃಕ್ಟರ್ ಪಡೆದು ಸರತಿ ಸಾಲಿನಲ್ಲಿ ಎರಡ್ಮೂರು ದಿನಗಳಿಂದ ಮಾರಾಟಕ್ಕಾಗಿ ಕಾಯುತ್ತಿದ್ದಾರೆ. ಸಂಗ್ರಹಿಸಿದ ಜೋಳವು ಮಳೆಯ ನೀರಿನಿಂದ ಮೊಳೆಕೆ ಒಡೆದು ಹಾಳಾಗುವ ಭೀತಿಯಲ್ಲಿವೆ. ರೈತರಿಗೆ ತಂತ್ರಾಂಶ ಲಾಕ್‌ಯಾಗಿರುವ ಬಗ್ಗೆ ಕಂಗಾಲು ಆಗಿದ್ದಾರೆ. ರೈತರ ಸಮಸ್ಯೆಗೆ ಸ್ಪಂದಿಸ ಬೇಕಾದ ಸಚಿವರು ಸಾಧನ ಸಮಾವೇಶದಲ್ಲಿ ಸಕ್ರಿಯ ಆಗಿದ್ದಾರೆ ಎಂದು ರೈತ ಮಲ್ಲಿಕಾರ್ಜುನ ತಿಳಿಸಿದರು.

ಕೋಟ್... ಬೆಂಬಲ ಬೆಲೆ ಯೋಜನೆಯಡಿ ಮುಂಗಾರಿನ ಬಿಳಿ ಜೋಳದ ಖರೀದಿಯ ಮಿತಿ ಪೂರ್ಣಗೊಂಡಿರುವುದರ ಬಗ್ಗೆ ಸರ್ಕಾರಕ್ಕೆ ಗಮನಕ್ಕೆ ತರಲಾಗಿದೆ. ತಾಲೂಕಿನ ಖರೀದಿ ಕೇಂದ್ರದಯೊಂದರಲ್ಲಿ ಜೋಳ ಹಾನಿಯಾಗಿರುವ ಬಗ್ಗೆ ಮಾಹಿತಿಯಿದ್ದು ಸೂಕ್ತ ರೀತಿಯಲ್ಲಿ ಸಂರಕ್ಷಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

- ಸಕೀನ, ಉಪ ನಿರ್ದೇಶಕಿ, ಆಹಾರ ಇಲಾಖೆ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net