ಬಳ್ಳಾರಿ ; ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ನಾನಾ ಇಲಾಖೆಗಳ ಪರಸ್ಪರ ಸಹಕಾರ ಮತ್ತು ಸಹಯೋಗದೊಂದಿಗೆ ಕಾರ್ಯನಿರ್ವಹಿಸಬೇಕಿದೆ ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೇರ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಎನ್‌ಪೋಲ್ಡ್ ಪ್ರೊ ಅಕ್ಟಿವ್ ಹೆಲ್ತ್ ಟ್ರಸ್ಟ್ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು, ವಿಶೇಷ ಮಕ್ಕಳ ಪೊಲೀಸ್ ಘಟಕ, ಸರ್ಕಾರಿ ಅಭಿಯೋಜಕರು, ವೈದ್ಯಾಧಿಕಾರಿಗಳು, ಬಾಲಮಂದಿರದ ಅಧೀಕ್ಷಕರು, ಕಾನೂನು ಪರಿವೀಕ್ಷಾಣಾಧಿಕಾರಿಗಳು, ಬೆಂಬಲ ವ್ಯಕ್ತಿಗಳು ಮತ್ತು ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥರಿಗೆ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ರಕ್ಷಣೆಗೆ ಹಲವಾರು ಇಲಾಖೆಗಳು ಸಹಭಾಗಿದಾರರಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾಪಂ ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿಗಳು ರಚಿಸಿದ್ದು, ಅವುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಸಂಬಂಧಿತ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡುವ ಮೂಲಕ ಮಕ್ಕಳ ಹಾಜರಾತಿ ಮತ್ತು ಸುರಕ್ಷತೆ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಶಿಕ್ಷಣ ಇಲಾಖೆ ಜತೆಗೂಡಿ ಶಾಲೆಯಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಆನ್‌ಲೈನ್ ಮೂಲಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನಿ ಮಾತನಾಡಿ, ಪೋಕ್ಸೋ ಕಾಯ್ದೆಯ ಕುರಿತು ಜನರಿಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಹಾಗಾಗಿ ಇಲಾಖೆಗಳ ನಡುವೆ ಉತ್ತಮ ಸಂವಹನ ಮತ್ತು ಸಹಯೋಗದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಿಕ ಎನ್‌ಪೋಲ್ಡ್ ಸಂಸ್ಥೆಯ ಮುಖ್ಯಸ್ಥ ಖುಷಿ ಕುಶಲಪ್ಪ ಮತ್ತು ಪೊಲೀಸ್ ತರಬೇತಿ ಸಂಪನ್ಮೂಲ ವ್ಯಕ್ತಿ ರೋಹಿತ್ ಕಾರ್ಯಕ್ರಮದ ಧ್ಯೇಯೋದ್ದೇಶ ವಿವರಿಸಿದರು.