ಗುತ್ತಿಗೆ ಕಾರ್ಮಿಕರೂ ಸ್ಕ್ಯಾವೇಂಜರ್‌ಗಳೇ, ಕಾರ್ಮಿಕ ಆಯುಕ್ತೆ ಎಸ್.ಆರ್.ವೀಣಾ ಪ್ರತಿಪಾದನೆ

120722 VIMS Contract labors Meeting
ಬಳ್ಳಾರಿಯ ವಿಮ್ಸ್‌ನ ಬಿಸಿ ರಾಯ್ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಮ್ಸ್ ಗುತ್ತಿಗೆ ನೌಕರರ ಸಮಾವೇಶವನ್ನು ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಆರ್.ವೀಣಾ ಉದ್ಘಾಟಿಸಿದರು.
Published on

ಬಳ್ಳಾರಿ: ಶೌಚಗೃಹಗಳನ್ನು ಸ್ವಚ್ಛಗೊಳಿಸುವ ಎಲ್ಲ ಗುತ್ತಿಗೆ ಕಾರ್ಮಿಕರನ್ನೂ ಸ್ಕ್ಯಾವೇಂಜರ್ಸ್‌ ಎಂದು ಪರಿಗಣಿಸಬೇಕು ಎಂದು ದಾವಣಗೆರೆಯ ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಆರ್.ವೀಣಾ ಹೇಳಿದರು.

ನಗರದ ವಿಮ್ಸ್‌ನ ಬಿಸಿ ರಾಯ್ ಸಭಾಂಗಣದಲ್ಲಿ ಗುತ್ತಿಗೆ ನೌಕರರ ಸಂಘ ಮಂಗಳವಾರ ಏರ್ಪಡಿಸಿದ್ದ ವಿಮ್ಸ್ ಗುತ್ತಿಗೆ ನೌಕರರ ಸಮಾವೇಶದಲ್ಲಿ ಮಾತನಾಡಿದರು. ಅವರಿಗೆ ದುಡಿಮೆಗೆ ತಕ್ಕ ಕನಿಷ್ಠ ವೇತನ ನೀಡಲೇಬೇಕು. ವಿಮ್ಸ್ ಆಡಳಿತ ಸ್ಕ್ಯಾವೇಂಜರ್ಸ್‌ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು. ಗುತ್ತಿಗೆದಾರರು ಕಾನೂನು ಪ್ರಕಾರ ನಿಯಮಿತ ವೇತನ, ಪಿಎಫ್ ಸೌಲಭ್ಯ, ಪೇಮೆಂಟ್ ಸ್ಲಿಪ್, ಇಎಸ್‌ಐ ಕಾರ್ಡ್‌ಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ವಿಮ್ಸ್ ಆಡಳಿತ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಮಾತನಾಡಿ, ದುಡಿಮೆಗೆ ತಕ್ಕಂತೆ ಕಾನೂನಾತ್ಮಕವಾಗಿ ದೊರೆಯಬೇಕಾದ ವೇತನದಲ್ಲೂ ಸಾಕಷ್ಟು ವ್ಯತ್ಯಾಸಗಳಾಗುತ್ತಿದೆ. ಕೆಲವೊಮ್ಮೆ ಕಾರಣಗಳಿಲ್ಲದೆ ಸಂಬಳದಲ್ಲಿ ಕಡಿತವಾಗುತ್ತದೆ. 2-3 ತಿಂಗಳಾದರೂ ವೇತನ ಗುತ್ತಿಗೆ ನೌಕರರ ಕೈ ಸೇರುವುದಿಲ್ಲ. ಕೆಲ ಗುತ್ತಿಗೆ ನೌಕರರಿಗಂತೂ 5-6 ತಿಂಗಳಾದರೂ ವೇತನ ನೀಡದೆ ಇರುವ ಉದಾಹರಣೆಗಳಿವೆ. ಇದರಿಂದಾಗಿ ಬೆಲೆ ಏರಿಕೆಯ ಈ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದರು.

ವಿಮ್ಸ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ.ಯೋಗೇಶ್, ಪ್ರಭಾರಿ ನಿರ್ದೇಶಕ ಡಾ.ಕೃಷ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಾರಿಕಾಂಬ, ವಿಮ್ಸ್ ಗುತ್ತಿಗೆ ಸಂಘದ ಕಾರ್ಯದರ್ಶಿ ಎ.ದೇವದಾಸ್, ಪ್ರಮುಖರಾದ ಡಾ.ಪ್ರಮೋದ್, ಶಾಂತಾ, ಜಿ.ಸುರೇಶ್, ಗುತ್ತಿಗೆ ನೌಕರರಾದ ಹುಲಗಪ್ಪ, ಲಕ್ಷ್ಮಿ, ಚಿಟ್ಟೆಮ್ಮ, ದುರ್ಗಮ್ಮ, ಹೊನ್ನೂರ್‌ಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net