ಸಂವಿಧಾನ ಪ್ರತಿಯೊಬ್ಬರ ಶ್ರೀರಕ್ಷೆ

Published on

ಬಳ್ಳಾರಿ : ಸಂವಿಧಾನ ಶಿಲ್ಪಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ಪ್ರತಿಯೊಬ್ಬರಿಗೂ ಶ್ರೀರಕ್ಷೆಯಾಗಿದೆ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದರು.

ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತುಳಿತಕ್ಕೊಳಗಾದವರನ್ನು ಮುಖ್ಯ ವಾಹಿನಿಗೆ ತರಲು ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಹಗಲು-ರಾತ್ರಿ ಎನ್ನದೇ ಶ್ರಮಿಸಿ ಅಪಾರ ಜ್ಞಾನ ಹೊಂದಿ ಸಂವಿಧಾನವನ್ನೆ ನಮಗೆ ಅರ್ಪಿಸಿದ್ದಾರೆ. ಅವರ ತತ್ವಾದರ್ಶ ಜೀವನ ಎಲ್ಲರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.

ಶೋಷಿತರು, ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲ ಸಮುದಾಯಗಳಿಗೆ ಸಮಾನ ಅವಕಾಶ ದೊರಕಿಸಿಕೊಡಬೇಕೆಂಬ ಆಶಯ ಹೊಂದಿದ್ದರು. ಅವರ ಆಶಯಗಳನ್ನೇ ನಮ್ಮ ಸರ್ಕಾರವು ಅಳವಡಿಸಿಕೊಂಡು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು.

ನಮ್ಮ ಸರ್ಕಾರದ 4 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ 38 ಸಾವಿರ ಕೋಟಿ ರೂ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಅಭಿವೃದ್ಧಿಗಾಗಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಶಾಸಕ ನಾರಾ ಭರತ ರೆಡ್ಡಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೇ ಅವರನ್ನು ಪ್ರತಿನಿತ್ಯವೂ ನೆನೆಯಬೇಕು. ಅವರು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾದವರಲ್ಲ, ಬದಲಾಗಿ ಎಲ್ಲ ಸಮುದಾಯದವರ ಶ್ರೇಯೋಭಿವೃದ್ಧಿಗೆ ತಮ್ಮ ಜೀವನವನ್ನೇ ಸವೆಸಿದವರು ಎಂದು ಹೇಳಿದರು.

ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವು ಸ್ವಾಭಿಮಾನದ ದಿನವಾಗಿದೆ. ಎಲ್ಲರೂ ಶಿಕ್ಷಣ ಹೊಂದುವ ಮೂಲಕ ಸಂಘಟಿತರಾಗಿ, ನಮ್ಮ-ನಮ್ಮ ಹಕ್ಕು ಸೌಲಭ್ಯಗಳನ್ನು ಪಡೆಯಲು ಹೋರಾಟ ನಡೆಸಬೇಕು. ಇದರಿಂದ ಸ್ವಾಭಿಮಾನದ ಜೀವನ ಹೊಂದಲು ಸಾಧ್ಯ ಎಂದು ಅಭಿವ್ಯಕ್ತ ಪಡಿಸಿದರು.

ದೇಶದ ಸಾಮಾನ್ಯ ವ್ಯಕ್ತಿಯು ಕೂಡ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಉನ್ನತ ಸ್ಥಾನ ಮತ್ತು ಅತ್ಯುನ್ನತ ಹುದ್ದೆ ಹೊಂದಲು ಬಾಬಾ ಸಾಹೇಬರು ನೀಡಿರುವ ಸಂವಿಧಾನ ಕಾರಣವಾಗಿದೆ ಎಂದು ಮನನ ಮಾಡಿದರು.

ವಿಎಸ್‌ಕೆ ವಿವಿ ಡಾ.ಬಿ.ಆರ್. ಅಂಬೇಡ್ಕರ್ ಬಹುಶಿಸ್ತೀಯ ಸಂಶೋಧನಾ ಕೇಂದ್ರದ ನಿರ್ದೇಶಕಿ ಪ್ರೊ. ಡಾ.ಗೌರಿ ಮಾಣಿಕ ಮಾನಸ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸದಲ್ಲಿ ಕಳೆದ ಸಾಲಿನಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 60 ದಿನಗಳ ಹೊಲಿಗೆಯಂತ್ರ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಹೊಲಿಗೆಯಂತ್ರ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಮೆರವಣಿಗೆಯಲ್ಲಿ ಸಾರಿಗೆ ಇಲಾಖೆ ವತಿಯಿಂದ ರೂಪಿಸಿದ್ದ ವಿಧಾನಸೌಧ ಸ್ತಬ್ಧಚಿತ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ವಿವಿಧ ಸರ್ಕಾರದ ಕಾರ್ಯಕ್ರಮಗಳು ಮತ್ತು ವಿವಿಧ ಯೋಜನೆಗಳ ಮಾಹಿತಿ ಕುರಿತ ಸ್ತಬ್ಧಚಿತ್ರಗಳು ಗಮನ ಸೆಳೆದವು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನೀಲಿ ಬಾವುಟಗಳನ್ನಿಡಿದು ಶಾಸಕರಾದ ಬಿ.ನಾಗೇಂದ್ರ, ನಾರಾ ಭರತರೆಡ್ಡಿ ಮತ್ತು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಮೊದಲಾದವರು ಸೇರಿದಂತೆ ನಗರ ಶಾಸಕರ ಕಚೇರಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಬೈಕ್ ರ‌್ಯಾಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net