ಬಳ್ಳಾರಿ : ಸಂವಿಧಾನ ಸಂರಕ್ಷಣೆ ಮಾಡುವ ಉದ್ದೇಶದಿಂದ ಏ.26 ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ಆಯೋಜಿಸಲಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಕುಮಾರ ಸಮತಾಳ್ ಹೇಳಿದರು.
ನಗರದಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಮಾವೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಸಮಾವೇಶದಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಪ್ರಸಿದ್ಧ ಚಿತ್ರನಟ ಪ್ರಕಾಶ್ ರಾಜ್, ದಿಟ್ಟ ಹೋರಾಟಗಾರ್ತಿ ಮೇ ಪಾಟ್ಕರ್, ಆರ್ಥಿಕ ತಜ್ಞ ಪರಕಾಲ ಪ್ರಾಕರ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸುವರು ಎಂದರು.
ಪ್ರತಿ ಊರು, ಕೇರಿ, ಬೀದಿಗಳಲ್ಲಿ ಸಂವಿಧಾನ ಸಂರಕ್ಷಕ ಪಡೆ ಹೆಸರಿನಲ್ಲಿ ದೇಶಪ್ರೇಮಿ ತಂಡಗಳನ್ನು ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಲಕ್ಷ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ವಿವರಿಸಿದರು.
ಭಾರತ ದೇಶವನ್ನು ಯಾವ ಬಲಾಢ್ಯ ಪಕ್ಷಗಳಿಂದಲೂ ರಕ್ಷಿಸಲು ಸ್ಯಾವಿಲ್ಲ. ನಾಗರೀಕರಾದ ನಾವೇ ಒಂದು ಪ್ರಬಲ ಸಾಮಾಜಿಕ ಶಕ್ತಿಯಾಗಿ ರೂಪಗೊಳ್ಳಬೇಕಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಲ್ಲ, ಆಳುವವರನ್ನು ಪ್ರಶ್ನಿಸಬಲ್ಲ, ಆಳ್ವಿಕೆಯನ್ನು ಬದಲಿಸಬಲ್ಲ, ನಾಗರೀಕ ಶಕ್ತಿಯಾಗಿ ತಳಮಟ್ಟದಿಂದ ದೇಶ ಮಟ್ಟದ ತನಕ ನಮ್ಮನ್ನು ನಾವು ಕಟ್ಟಿಕೊಳ್ಳಬೇಕಿದೆ ಎಂದು ತಿಳಿಸಿದರು. ಮುಖಂಡರಾದ ಕೆ.ಇ.ಚಿದಾನಂದಪ್ಪ, ಎನ್.ಡಿ.ವೆಂಕಮ್ಮ, ಎಂ.ಎಲ್.ಕೆ.ನಾಯ್ಡು, ಕೃಷ್ಣ ಇದ್ದರು.