ಶೇ. 40 ಕಮಿಷನ್ ಕುರಿತು ಆಗಲಿ ತನಿಖೆ; ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹ

26082022 v s ugrappa
Published on

ಬಳ್ಳಾರಿ: ರಾಜ್ಯದ ಎಲ್ಲ ಇಲಾಖೆಗಳಲ್ಲಿ 40 ಪರ್ಸೆಂಟೇಜ್ ಕಮಿಷನ್ ಪಡೆಯುತ್ತಿರುವ ಬಗ್ಗೆ ಸತ್ಯ ಅರಿಯಲು ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಕಮಿಷನ್ ಆರೋಪವನ್ನು ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಸಚಿವ ಸಂಪುಟದ ಬಹುತೇಕ ಸಚಿವರು, ಶಾಸಕರು, ಅಧಿಕಾರಿಗಳು ಜೈಲು ಸೇರಲಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದರು.

ಇತ್ತೀಚೆಗೆ ರಾಜ್ಯದಲ್ಲಿ ಅಭಿವೃದ್ದಿ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಧಾರ್ಮಿಕ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿವೆ. ಕಾಂಗ್ರೆಸ್ ಸರ್ಕಾರದಲ್ಲಿದ್ದ ಹಲವು ಯೋಜನೆಗಳನ್ನು ಬಿಜೆಪಿ ಮುಂದುವರಿಸುತ್ತಿಲ್ಲ. ಇಲ್ಲಿಯವರೆಗೂ ವಿದ್ಯಾರ್ಥಿವೇತನ ಬಿಡುಗಡೆಗೊಳಿಸಿಲ್ಲ. ಬಡ ಹಾಗೂ ಮಧ್ಯಮ ವರ್ಗಗಳ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ ಎಂದರು.

ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂದು ಯಾವ ಪುಸ್ತಕದಲ್ಲೂ ಹೇಳಿಲ್ಲ. ಆ ವಿಷಯವನ್ನೇ ಆಡಳಿತಾರೂಢ ಪಕ್ಷ ದೊಡ್ಡದಾಗಿ ಪ್ರಚಾರ ಮಾಡುತ್ತಿದೆ. ಬಿಜೆಪಿಯರು ರಾಮನ ಆಧುನಿಕ ಭಕ್ತರು. ಅವರಿಗೆ ತಾಕತ್ತಿದ್ದರೆ ಮಾಂಸ ತಿಂದವರು ಬಿಜೆಪಿ ಕಚೇರಿ ಹಾಗೂ ಆರ್‌ಎಸ್‌ಎಸ್ ಶಾಖೆಗೆ ಬರಬಾರದು ಎಂದಾಗಲಿ, ಮಾಂಸ ತಿಂದವರು ನಮ್ಮ ಪಕ್ಷಕ್ಕೆ ಮತ ಚಲಾಯಿಸಬೇಡಿ ಎಂದಾಗಲಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಪೆಗಾಸಸ್ ತನಿಖೆಯಲ್ಲಿ ಕೇಂದ್ರ ಸರ್ಕಾರ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ವರದಿ ನೀಡಿದೆ. ಬಿಜೆಪಿಗೆ ದೇಶದ ಸಂವಿಧಾನ, ರಾಷ್ಟ್ರಧ್ವಜ, ಪ್ರಜಾಪ್ರಭುತ್ವ ಹಾಗೂ ನ್ಯಾಯಾಂಗದ ಮೇಲೆ ಕಿಂಚಿತ್ತು ವಿಶ್ವಾಸವಿಲ್ಲ. ಯಾವುದೇ ಪಕ್ಷದ ಶಾಸಕರು ಅವಧಿ ಪೂರ್ಣಗೊಳ್ಳುವವರೆಗೂ ಪಕ್ಷಾಂತರವಾಗದೇ ಇರುವಂತೆ ಕಾಯ್ದೆ ಜಾರಿ ತರಬೇಕು ಎಂದರು.

ಪ್ರಮುಖರಾದ ವೆಂಕಟೇಶ್ ಹೆಗಡೆ, ಹನುಮ ಕಿಶೋರ್, ರವೀಂದ್ರನಾಥ, ಲೊಕೇಶ್, ಕುಮಾರಮ್ಮ, ರಾಮಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net