ಎಸ್‌ಸಿ-ಎಸ್‌ಟಿಗೆ ನೀಡುವ ಅನುದಾನ ಕಡಿತ ಸಲ್ಲ - ಡಾ.ಜಿ.ಪರಮೇಶ್ವರ್ ಅಸಮಾಧಾನ

Parameshwar
Published on

ಬಳ್ಳಾರಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ರಾಜ್ಯ ಬಜೆಟ್‌ನಲ್ಲಿ ಪ್ರತಿ ವರ್ಷ ಶೇ.24.1 ರಷ್ಟು ಅನುದಾನವನ್ನು ಮೀಸಲಿಡಬೇಕು. ಆದರೆ ಬಿಜೆಪಿ ಸರ್ಕಾರ ಅದನ್ನು ಕಡಿತಗೊಳಿಸಿದೆ ಎಂದು ಕಾಂಗ್ರೆಸ್‌ನ ನಾಯಕ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಬಜೆಟ್‌ನಲ್ಲಿ ಶೇ.24.1 ರಷ್ಟು ಹಣವನ್ನು ಪರಿಶಿಷ್ಟರಿಗಾಗಿ ಮೀಸಲಿಡಲಾಗುತ್ತಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಅದನ್ನು ಕಡಿತ ಮಾಡಿದಲ್ಲದೆ ದುರುಪಯೋಗಿಸಿಕೊಂಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ವರ್ಷ ಎಸ್‌ಸಿ-ಎಸ್‌ಟಿಗೆ 42 ಸಾವಿರ ಕೋಟಿ ರೂ. ಮೀಸಲಿಡಬೇಕಿದ್ದ ಬಿಜೆಪಿ ಸರ್ಕಾರ ಕಳೆದ ಬಜೆಟ್‌ನಲ್ಲಿ 20 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಅದರಲ್ಲಿ 8 ಸಾವಿರ ಕೋಟಿ ರೂ. ಬೇರೆ ಕೆಲಸಗಳಿಗೆ ದುರುಪಯೋಗಿಸಿಕೊಳ್ಳಲಾಗಿದೆ. ಎಸ್‌ಟಿ-ಎಸ್‌ಟಿಗೆ ಕೈಗಾರಿಕೆ ಸ್ಥಾಪನೆಗೆ ಶೇ.18 ರಷ್ಟು ಜಾಗವನ್ನು ಮೀಸಲಿಡಲಾಗುತ್ತಿತ್ತು. ಅದನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿೃಸಿದೆ ಎಂದರು.

ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳು ಅನೇಕ ವರ್ಷಗಳಿಂದ ಶೋಷಣೆಗೆ ಒಳಪಟ್ಟಿವೆ. ಅವರ ಅಭಿವೃದ್ಧಿಗೆ ಸರ್ಕಾರಗಳು ಶ್ರಮಿಸಬೇಕಿದೆ. ರಾಜ್ಯದಲ್ಲಿ ಕೆಳ ಸಮುದಾಯಗಳು ಹರಿದು ಹಂಚಿ ಹೋಗಿವೆ. ಅವರ ಅಭಿವೃದ್ಧಿಗಾಗಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಲಾಗುವುದು ಎಂದರು.

ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನು ಆಡುತ್ತಿದ್ದಾರೆ. ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ಕ್ಕೆ ಧಕ್ಕೆ ಆಗದಂತೆ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಧ್ವನಿಯನ್ನು ಎತ್ತಿಹಿಡಿಯುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಅವಧಿಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ 160 ಭರವಸೆಗಳನ್ನು ಭಾಗಶಃ ಈಡೇರಿಸಲಾಗಿದೆ. ಆದರೆ ಈಗಿನ ಬಿಜೆಪಿ ಸರ್ಕಾರ ಸುಳ್ಳು ಭರವಸೆ ನೀಡುವ ಕೆಲಸವನ್ನು ಮಾಡುತ್ತಿದೆ. ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಮಸೂದೆ ಮಂಡಿಸಲಾಗಿದೆ. ಆದರೆ ಕೇಂದ್ರದಲ್ಲಿ ಮೀಸಲಾತಿ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಈ ದ್ವಂದ್ವ ನೀತಿಯಿಂದ ಜನರಿಗೆ ಅನ್ಯಾಯವಾಗುತ್ತಿದೆ ಎಂದರು.

ದಲಿತ ಸಿಎಂ ಘೋಷಣೆ ಮಾಡಲಿ: ದಲಿತರನ್ನು ಕಾಂಗ್ರೆಸ್ ಶೋಷಣೆ ಮಾಡಿದೆ ಎನ್ನುವ ಬಿಜೆಪಿ ನಾಯಕರು ನಿಜವಾಗಿಯೂ ದಲಿತರ ಮೇಲೆ ಕಾಳಜಿ ಇದ್ದರೆ ದಲಿತ ಮುಖ್ಯಮಂತ್ರಿಯನ್ನು ಘೋಷಣೆ ಮಾಡಲಿ ಎಂದು ಪರಮೇಶ್ವರ್ ಸವಾಲು ಹಾಕಿದರು.

ಕೇವಲ ಬಾಯಿ ಮಾತಿನಲ್ಲಿ ಘೋಷಣೆಗಳನ್ನು ಮಾಡದೆ ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಬೇಕು. ಕಾಂಗ್ರೆಸ್‌ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ. ನಮ್ಮಲ್ಲಿ ಯಾವುದೇ ಒಡಕು ಇಲ್ಲ. ನಾನು ಕೂಡ ಪವರ್‌ಫುಲ್ ಆಗಿಯೇ ಕೆಲಸ ಮಾಡುತ್ತಿದ್ದೇನೆ. ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಡಿ.ಕೆ.ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ. ನಾನು ನೇಪಥ್ಯಕ್ಕೆ ಸರಿದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

5 ಲಕ್ಷ ಜನರು ಸೇರುವ ನಿರೀಕ್ಷೆ: ಚಿತ್ರದುರ್ಗದಲ್ಲಿ ಜ.8ರಂದು ಬೆಳಗ್ಗೆ 11 ಗಂಟೆಗೆ ಎಸ್‌ಸಿ-ಎಸ್‌ಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 5 ಲಕ್ಷ ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜ್ಯದ ಪ್ರಮುಖ ನಾಯಕರು, ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಮುಂದಿನ ಚುನಾವಣೆಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಪ್ರಣಾಳಿಕೆ ಮೂಲಕ ಜನರ ಮುಂದೆ ಇಡಲಾಗುವುದು ಎಂದರು.

ಇಲ್ಲಿಗೆ ಚರ್ಚೆ ನಿಲ್ಲಲಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡ ಪರಮೇಶ್ವರ್ ಅವರು, ಸಿಎಂ ಬೊಮ್ಮಾಯಿ ಅವರನ್ನು ನಾಯಿ ಮರಿಗೆ ಹೋಲಿಕೆ ಮಾಡಿರುವ ವಿಚಾರ ಇಲ್ಲಿಗೆ ನಿಲ್ಲಲಿ. ಅದನ್ನು ಹೆಚ್ಚು ಪ್ರಚಾರಗೊಳಿಸುವುದು ಸರಿಯಲ್ಲ ಎಂದರು.

ಮಾಜಿ ಸಚಿವ ಪಿ.ಟಿ.ಪರಮೇಶ್ವರ್‌ನಾಯ್ಕ, ಡಾ.ಎಚ್.ಸಿ.ಮಹಾದೇವಪ್ಪ, ಮಾಜಿ ಸಂಸದ ಎಂ.ಚಂದ್ರಪ್ಪ, ಶಾಸಕರಾದ ಈ.ತುಕಾರಾಮ್, ಬಿ.ನಾಗೇಂದ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹಮದ್ ರಫೀಕ್, ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net