ಕಾಂಗ್ರೆಸ್ ಶಿಫಾರಸ್ಸುಗೆ ಬಗ್ಗಲ್ಲ, ಜಗ್ಗಲ್ಲ

Published on

ಬಳ್ಳಾರಿ : ಪ್ರಾಸಿಕ್ಯೂಷನ್ ಅನುಮತಿಗೆ ಶಿಫಾರಸ್ಸು ಹೊರಡಿಸಿರುವ ಕಾಂಗ್ರೆಸ್ ಕುತಂತ್ರಕ್ಕೆ ಬಗ್ಗಲ್ಲ ಜಗ್ಗಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದರು.

ಸಂಡೂರಿನ ತಾರಾನಗರ, ಬನ್ನಿಹಟ್ಟಿ, ತಾಳೂರು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದರು. ಕೋವಿಡ್‌ನಲ್ಲಿ ಪ್ರಾಮಾಣಿಕತೆಯಾಗಿ ಮಾಡಿರುವ ಕೆಲಸವನ್ನು ಬೇರೆ ದಾರಿಯಿಲ್ಲದೆ ಸಿಎಂ ಸಿದ್ದರಾಮಯ್ಯ ಕೆದಕಲು ಹೊರಟಿದ್ದಾರೆ. ಪ್ರಾಸಿಕ್ಯೂಷನ್ ಅನುಮತಿಗೆ ಶಿಫಾರಸ್ಸು ಮಾಡಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ. ಮಾಜಿ ಸಚಿವ ಬಿ. ಶ್ರೀರಾಮುಲು ಯಾವುದೇ ಹಗರಣ ಮಾಡಿಲ್ಲ. ರಾಜಕೀಯ ದ್ವೇಷಕ್ಕೆ ಪ್ರಾಸಿಕ್ಯೂಷನ್ ಶಿಫಾರಸ್ಸು ನೀಡಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ಅವಧಿಯಲ್ಲಿ ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ಯಾವ ತನಿಖೆಯಾದರೂ ಅನುಮತಿ ನೀಡಲಿ ಎಂದು ಗುಡುಗಿದರು. ಈ ಪ್ರಾಸಿಕ್ಯೂಷನ್‌ನಿಂದ ಏನು ಪರಿಣಾಮ ಬಿರುವುದಿಲ್ಲ ಎದುರಿಸಲು ಕೋರ್ಟ್, ಕಚೇರಿಗಳಿವೆ ಎಂದರು. ಸಂಡೂರಿನ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದರಿಂದ ಕಾಂಗ್ರೆಸ್ ಸರ್ಕಾರ ಬೀಳಲ್ಲ . ಈ ಗೆಲುವು ರಾಜ್ಯ ಸರ್ಕಾರ ಕ್ಕೆ ಎಚ್ಚರಿಕೆ ಗಂಟೆಯಾಗಲಿದೆ. ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ರಾಜ್ಯ ಸರ್ಕಾರ ಸಿಲುಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಉಪ ಚುನಾವಣೆಯಲ್ಲಿ ಸೋಲುವ ಭೀತಿ ಶುರುವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಹಲವು ಯೋಜನೆಗಳು ಸ್ಥಗಿತಗೊಂಡಿವೆ. ಅಲ್ಲದೆ, ಮಹಿಳೆಯರಿಗಾಗಿಯೇ ಭಾಗ್ಯಲಕ್ಷ್ಮೀಯನ್ನು ಯೋಜನೆಯನ್ನು ಬಿಜೆಪಿ ಜಾರಿ ಮಾಡಲಾಗಿತ್ತು. ಈ ವರ್ಷ ಆ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪಬೇಕಿದೆ. ದಿವಾಳಿಯಾಗಿರುವ ಈ ಸರ್ಕಾರಕ್ಕೆ ಕೊಡಲು ಅನುದಾನವಿಲ್ಲ. ಆದ್ದರಿಂದ, ರಾಜ್ಯಾದ್ಯಂತ ಹೋರಾಟ ನಡೆಸಿ ಹಣ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ಶಾಸಕರಾದ ಬೈರತಿ ಬಸವರಾಜ, ಜಿ. ಜನಾರ್ದನರೆಡ್ಡಿ, ಕರಿಯಮ್ಮ, ನೇಮಿರಾಜ ನಾಯ್ಕ, ಅಭ್ಯರ್ಥಿ ಬಂಗಾರು ಹನುಮಂತು ಇದ್ದರು.

====

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net