ಬಳ್ಳಾರಿ : ಹಲವು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ರೈತರ ಜಮೀನುಗಳಿಗೆ ವಕ್ಪ್‌ನಿಂದ ನೋಟಿಸ್ ನೀಡಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಶಾಸಕ ಜಿ.ಜರ್ನಾದನರೆಡ್ಡಿ ಹೇಳಿದರು.
ನಗರದ ಡಿಸಿ ಕಚೇರಿಯ ಮುಂಭಾಗದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಗುರುವಾರ ನಡೆದ ನಮ್ಮ ಭೂಮಿ ನಮ್ಮ ಹಕ್ಕು ವಕ್ಪ್ ಅಕ್ರಮದ ವಿರುದ್ಧ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ರಾಜ್ಯದಲ್ಲಿ ರೈತರು ಉಳುಮೆ ಮಾಡುತ್ತಿದ್ದ ಭೂಮಿಯನ್ನ ಕಬಳಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಸಚಿವ ಜಮೀರ್ ಅಹ್ಮದ್‌ಖಾನ್ ಒಬ್ಬ 420 ಸಚಿವರಾಗಿರುವುದರಿಂದ ಈ ಗೊಂದಲ ಉಂಟಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕೇವಲ ಬಾಯಿ ಮಾತಿನಿಂದ ಹೇಳಿದರೆ ಸಾಲದು ಗೆಜೆಟೆಡ್ ನೋಟಿಫಿಕೇಷನ್ ಮಾಡಿ ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುವುದನ್ನು ಬಿಜೆಪಿ ಖಂಡಿಸಿದೆ ಎಂದರು. ಗಣಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಲವು ರೈತರಿಗೆ ವಕ್ಪ್ ನಿಂದ ನೋಟಿಸ್ ನೀಡಲಾಗಿದ್ದು ಕೂಡಲೇ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು. ರಾಜ್ಯದ ರೈತರಿಗೆ ಅನ್ಯಾಯವಾದರೆ ಬಿಜೆಪಿ ಖಂಡಿತವಾಗಿ ಸುಮ್ಮನೆ ಕೂರುವುದಿಲ್ಲ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಮಾತನಾಡಿ, ಜಮೀರ್ ಅಹ್ಮದ್ ಅಂತಹವರನ್ನು ಮಂತ್ರಿಯನ್ನಾಗಿ ಮಾಡಿರುವುದು ರಾಜ್ಯಕ್ಕೆ ದುರ್ದವೈ. ದುರಾಸೆಗೆ ಒಳಪಟ್ಟು ವಕ್ಪ್ ಮಂಡಳಿ ಮೂಲಕ ರಾಜ್ಯದ ಭೂಮಿ ಕದಿಯಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಸಂಪೂರ್ಣವಾಗಿ ವಕ್ಪ್ ಮಂಡಳಿ ರದ್ದು ಆಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜತೆಗೂಡಿ ವಕ್ಪ್ ಗೆ ಯಾವ ರೀತಿ ಆಸ್ತಿ ಬಂದಿದೆ ಎಂಬುದನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಬಿ.ಶ್ರೀರಾಮುಲು, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ ಮೋಕಾ ಮಾತನಾಡಿದರು. ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಅಕ್ರೋಶ ಹೊರ ಹಾಕಿದರು. ನೂರರು ಕಾರ್ಯಕರ್ತರು ವಕ್ಪ್ ನೀತಿಯ ಖಂಡನೀಯ ಪೋಸ್ಟರ್‌ಗಳು ಹಿಡಿದು ಪ್ರದರ್ಶಿಸಿದರು.