ನರೇಗಾ ಅಕ್ರಮ ತಡೆಗೆ ಆಗ್ರಹ

17082022 kmp
Published on

ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಪಂನಲ್ಲಿನ ನರೇಗಾ ಅಕ್ರಮ ತಡೆಗೆ ಆಗ್ರಹಿಸಿ ನಂ.5 ಬೆಳಗೋಡ್‌ಹಾಳಿನ ಡಾ.ಬಿ.ಆರ್. ಅಂಬೇಡ್ಕರ್ ದಲಿತ ಸಂಘದ ಪದಾಧಿಕಾರಿಗಳು ತಾಪಂ ನೌಕರ ವೀರಭದ್ರಗೌಡಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಂಘದ ರಾಜ್ಯಾಧ್ಯಕ್ಷ ಕೆ.ರಾಮಕೃಷ್ಣ ಮಾತನಾಡಿ, ನಂ.10 ಮುದ್ದಾಪುರ ಗ್ರಾಪಂ ಕಾರ್ಯದರ್ಶಿ, ಕಾಯಕಬಂಧುಗಳು, ಡಾಟ ಆಪರೇಟರ್‌ಗಳು ಸೇರಿಕೊಂಡು ನರೇಗಾ ಕೂಲಿ ಕಾರ್ಮಿಕರ ಹಣವನ್ನು ಲಪಟಾಯಿಸುತ್ತಿದ್ದಾರೆ. ಕಾಮಗಾರಿಗಳಲ್ಲಿ ಕೆಲಸಕ್ಕೆ ಬಾರದಿರುವವ ಹೆಸರುಗಳನ್ನು ನೋಂದಾಯಿಸಿ, ಅವರ ಹಾಜರಾತಿ ಪಡೆದು ಹಣ ಪಡೆದುಕೊಳ್ಳುತ್ತಿದ್ದಾರೆ. ನೈಜವಾಗಿ ಕೆಲಸ ಮಾಡಿದ ಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ನೀಡುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ನರೇಗಾದಲ್ಲಿನ ಅಕ್ರಮ ತಡೆಯಬೇಕು. ನೈಜ ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮನವಿ ಸಲ್ಲಿಕೆ ವೇಳೆ ಸಂಘದ ರಾಜ್ಯ ಉಪಾಧ್ಯಕ್ಷ ನಬಿಸಾಬ್, ಪ್ರಧಾನ ಕಾರ್ಯದರ್ಶಿ ದೊಡ್ಡ ಬಸವರಾಜ ಬಡಿಗಿ, ಸಂಘಟನಾ ಕಾರ್ಯದರ್ಶಿ ಎನ್.ನಾಗರಾಜ, ಜಿಲ್ಲಾಧ್ಯಕ್ಷ ಎಚ್. ವೆಂಕಟೇಶ್, ಉಪಾಧ್ಯಕ್ಷ ಎಚ್.ರೇಣುಕಪ್ಪ, ಪ್ರಮುಖರಾದ ಇರ್ಫಾನ್, ಓಂಕಾರ, ಮಲ್ಲಿಕಾರ್ಜುನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net