ಬಳ್ಳಾರಿ : ಜಿಲ್ಲೆಯಲ್ಲಿ ಬಿಜೆಪಿ ವರ್ಷದಿಂದ ವರ್ಷಕ್ಕೆ ಬಲಹೀನ ಕಾರಣದಿಂದ ಪಕ್ಷ ಸಂಘಟನೆಗಾಗಿ ಜಿಲ್ಲಾಧ್ಯಕ್ಷ, ಪದಾಧಿಕಾರಿಗಳ ಬದಲಾವಣೆ ಆರಂಭವಾಗಿದ್ದು ಪಟ್ಟಕ್ಕೇರಲು ಹಲವು ಅಕಾಂಕ್ಷಿಗಳು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯು ಮುಂದಿನ ತಿಂಗಳಿಂದ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದ ಅಧ್ಯಕ್ಷರನ್ನು ಹೊಸದಾಗಿ ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಆದ್ದರಿಂದ, ರಾಜ್ಯ ಮುಖಂಡರೊಬ್ಬರು ಗಣಿಜಿಲ್ಲೆಯಲ್ಲಿಯೂ ಜಿಲ್ಲಾಧ್ಯಕ್ಷ ಬದಲಾವಣೆಗಾಗಿ ಅಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿ ಹಾಗೂ ಹಿರಿಯ ಸ್ಥಳೀಯ ನಾಯಕರ ಸಲಹೆ ಪಡೆದಿದ್ದಾರೆ.
ಪ್ರಸ್ತುತ ಸಂಘ ಪರಿವಾರದ ಹಿನ್ನಲೆ ಹಾಗೂ ಉನ್ನತ ನಾಯಕರ ಸಂಪರ್ಕ ಹೊಂದಿರುವ ಅನಿಲ್‌ಕುಮಾರ ಮೋಕಾ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಂಡಿದೆ. ಇವರ ಅವಧಿಯಲ್ಲಿಯೇ ಲೋಕಸಭಾ, ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ. ರಾಜ್ಯ ನಾಯಕರ ಸೂಚನೆಯಂತೆ ಜಿಲ್ಲೆಯಲ್ಲಿ ಪ್ರತಿಭಟನೆ, ಧರಣಿ ನಡೆಸುವಲ್ಲಿ ಮುಂಚೂಣಿ ಬಿಟ್ಟರೆ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವಲ್ಲಿ ಎಡವಿದ್ದಾರೆ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಅಕಾಂಕ್ಷಿಗಳ ಪೈಪೋಟಿ : ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನದ ಬದಲಾವಣೆ ಪರ್ವ ಆರಂಭವಾಗುತ್ತಿದ್ದಂತೆ ಐದು ತಾಲೂಕುಗಳಿಂದಲೂ ಹಲವು ಅಕಾಂಕ್ಷಿಗಳು ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಇದರಲ್ಲಿ ಹಾಲಿ ಅನಿಲ ಕುಮಾರ ಮೋಕಾ ಇನ್ನೂ ಎರಡು ವರ್ಷ ಮುಂದುವರೆಯುವ ಆಸಕ್ತಿ ವಹಿಸಿದ್ದಾರೆ. ಶಾಸಕ ಜಿ.ಜನಾರ್ದನರೆಡ್ಡಿ ಅಪ್ತ ಎನಿಸಿಕೊಂಡಿರುವ ಗೋನಾಳ್ ರಾಜಶೇಖರಗೌಡ ಈ ಬಾರಿ ಶತಸಿದ್ದವಾಗಿ ಪಣತೊಟ್ಟಿದ್ದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಏರಲು ರಾಜ್ಯ ನಾಯಕರ ಜತೆ ಚರ್ಚಿಸಿದ್ದಾರೆ. ರೆಡ್ಡಿ ಹಾಗೂ ಸ್ಥಳೀಯರ ಬೆಂಬಲದಿಂದ ನಾಯಕರ ಮನವೋಲಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮುಂಬರುವ ತಾಪಂ ಹಾಗೂ ಜಿಪಂ ಚುನಾವಣೆ ಹಿನ್ನೆಲೆ ಬಿಜೆಪಿಗೆ ಹೆಚ್ಚಿನ ಮತಗಳನ್ನು ಸೆಳೆಯುವ ಉದ್ದೇಶದಿಂದ ಲಿಂಗಾಯತ ನಾಯಕರಿಗೆ ಮನ್ನಣೆ ಹಾಕುವುದಾದರೆ ರಾಜಶೇಖರಗೌಡ ಸ್ಥಾನ ಸಿಗಲಿದೆ ಎಂಬುದು ಚರ್ಚೆಯಿದೆ. ಇವರ ಹೊರತಾಗಿ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ರೆಡ್ಡಿ ಬೆಂಬಲಿಗ ದಮ್ಮೂರು ಶೇಖರ, ರೈತ ಮೋರ್ಚಾ ಅಧ್ಯಕ್ಷ ಗಣಪಾಲ ಐನಾಥರೆಡ್ಡಿ, ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಅಕಾಂಕ್ಷಿಗಳ ಪ್ರಮುಖ ಸಾಲಿನಲ್ಲಿದ್ದಾರೆ. ಕಳೆದ ಲೋಕಸಭಾ ಹಾಗೂ ಉಪಚುನಾವಣೆಯಲ್ಲಿ ಸೋತಿರುವ ಬಿಜೆಪಿಯು ಮುಂದಿನ ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಮತಗಳನ್ನು ಪಡೆಯುವ ತಂತ್ರಗಾರಿಕೆ ರೂಪಿಸುವ, ಪಕ್ಷ ಸಂಘಟನೆ, ಕಾರ್ಯಕರ್ತರ ವಿಶ್ವಾಸದಿಂದ ತಳಮಟ್ಟದಿಂದಲೂ ಕಾರ್ಯಕರ್ತರ ಪಡೆಯನ್ನು ಕಟ್ಟುವಂತಹ ನಾಯಕರನ್ನು ಗುರುತಿಸಿಲಿದೆ ಎಂಬ ಮಾತುಗಳು ಕೇಳುತ್ತಿವೆ.
ನಾಯಕರ ನಡುವೆ ಪೈಪೋಟಿ : ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಜಿ.ಜನಾರ್ದನರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರ ಯಾರ ಬೆಂಬಲಿಗರನ್ನು ಆಯ್ಕೆ ಮಾಡಬೇಕು ಎಂಬುದು ರಾಜ್ಯ ಬಿಜೆಪಿಗೆ ಚಿಂತೆಯಾಗಿದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿರುವ ಪೈಕಿ ಎಲ್ಲರೂ ಸದ್ಯ ರೆಡ್ಡಿ ಬೆಂಬಲಿಗರು. ಒಂದು ವೇಳೆ ರೆಡ್ಡಿ ಬೆಂಬಲಿಗರಿಗೆ ಬಿಜೆಪಿ ಮನ್ನಣೆ ಹಾಕಿದರೆ ಮೇಲಗೈ ಸಾಧಿಸದಂತೆ ಆಗುತ್ತದೆ. ಈಗಾಗಲೇ ಕಳೆದ ಉಪಚುನಾವಣೆಯಲ್ಲಿ ಸಂಡೂರು ಉಸ್ತುವಾರಿ ರೆಡ್ಡಿಗೆ ನೀಡಿದ್ದರಿಂದ ರೆಡ್ಡಿ ಮತ್ತು ರಾಮುಲು ನಡುವೆ ಇರಿಸು ಮುರಿಸು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದ್ದರಿಂದ, ಇಬ್ಬರ ನಾಯಕರನ್ನು ಮನವೊಲಿಸಿ ಜಿಲ್ಲಾಧ್ಯಕ್ಷ ಸ್ಥಾನ ಆಯ್ಕೆ ಮಾಡಬೇಕಿರುವುದು ಬಿಜೆಪಿಯ ಲೆಕ್ಕಚಾರವಾಗಿದೆ. ಕೆಲವೇ ದಿನಗಳಲ್ಲಿ ಯಾರು ನೂತನ ಸಾರಥಿ ಆಗಲಿದ್ದಾರೆ ಎಂಬುದು ಕಾದು ನೋಡಬೇಕಿದೆ.
ಕೋಟ್... ನೂತನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ಪ್ರಮುಖ ಅಕಾಂಕ್ಷಿಯಾಗಿರುವೆ. ಅಲ್ಲದೆ, ರಾಜ್ಯ ನಾಯಕರು ಕೂಡ ಒಲವು ತೋರಿದ್ದಾರೆ. ರಾಜ್ಯ ನಾಯಕರಿಗೆ ತಲುಪಿರುವ ಮೂವರ ಅಕಾಂಕ್ಷಿಗಳ ಅರ್ಜಿಗಳಲ್ಲಿ ನನ್ನದು ಒಂದು ಕೂಡಯಿದೆ. ಹಲವು ವರ್ಷಗಳಿಂದ ಪಕ್ಷ ಸಂಘಟನೆಗೆ ಶ್ರಮಿಸಿರುವೆ ಈ ಬಾರಿ ನಾಯಕರು ಸ್ಥಾನ ಕಲ್ಪಿಸುವ ವಿಶ್ವಾಸವಿದೆ.
- ಗೋನಾಳ್ ರಾಜಶೇಖರಗೌಡ, ಅಕಾಂಕ್ಷಿ, ಬಿಜೆಪಿ, ಬಳ್ಳಾರಿ.
==