ಶೀಘ್ರದಲ್ಲೇ ಕೋಲ್ಡ್ ಸ್ಟೋರೇಜ್ ನಿರ್ಮಾಣ

Published on

ಬಳ್ಳಾರಿ ; ನಗರದಲ್ಲಿ ರಾಜ್ಯ ಸರ್ಕಾರದಿಂದ ನಿರ್ಮಿಸಲು ಉದ್ದೇಶಿಸಿರುವ ಎಪಿಎಂಸಿ ವ್ಯಾಪ್ತಿಯ ಕೋಲ್ಡ್ ಸ್ಟೋರೇಜ್ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ.

ಇಲ್ಲಿನ ಆಲದಹಳ್ಳಿಯಲ್ಲಿ 11.75 ಕೋಟಿ ರೂ. ವೆಚ್ಚದಲ್ಲಿ ಮೂರು ಸಾವಿರ ಮೀ. ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ಮಾಣದ ಬಗ್ಗೆ ಈಗಾಗಲೇ ಸ್ಟೇಟ್ ಲೆವಲ್ ಟೆಕ್ನಿಕಲ್ ಕಮಿಟಿ (ಎಸ್‌ಎಲ್‌ಟಿಸಿ) ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆ ಸೇರಿದಂತೆ ವಿವಿಧ ಬೆಳೆದ ರೈತರ ಬೆಳೆಗಳನ್ನು ಸಂರಕ್ಷಿಸಲು ಅನುಕೂಲವಾಗಲಿದೆ. ಕಳೆದ ವರ್ಷ ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆ ದೊರೆಯದೆ ಇದ್ದರಿಂದ ಕೋಟ್ಯಾಂತರ ರೂ. ಮೌಲ್ಯದ ಲಕ್ಷಾಂತರ ಕ್ವಿಂಟಾಲ್‌ನಷ್ಟು ಮೆಣಸಿನಕಾಯಿ ಚೀಲಗಳನ್ನು ಇಲ್ಲಿನ ಖಾಸಗಿ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಇಡಲಾಗಿದೆ. ಅಲ್ಲದೆ, ಈ ವರ್ಷವೂ ಕೂಡ ನೀರಿಕ್ಷಿತ ಬೆಲೆ ಸಿಗದೆ ಇದ್ದರಿಂದ ಹಲವು ರೈತರು ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟಿರುವ ಮೆಣಸಿನಕಾಯಿ ಮಾರಾಟ ಮಾಡಲು ಮುಂದಾಗಿಲ್ಲ. ಆದ್ದರಿಂದ, ಪ್ರಸ್ತಕ ಸಾಲಿನಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರು ಸೂಕ್ತವಾದ ಕೋಲ್ಡ್ ಸ್ಟೋರೇಜ್‌ಗಳು ಸಿಗದೆ ಇದ್ದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾದರು. ನಗರದಲ್ಲಿ ನಿರ್ಮಿಸಿರುವ ಬಹುತೇಕ ಖಾಸಗಿ ಕೋಲ್ಡ್ ಸ್ಟೋರೇಜ್‌ಗಳು ಜಮೀನುದಾರರಿಗೆ ಸೇರಿವೆ. ಇದರಿಂದ, ಅವರ ಸ್ವಂತ ಜಮೀನಿನ ಬೆಳೆಗಳನ್ನು ಸಂರಕ್ಷಿಸಲು ಮೊದಲ ಅದ್ಯತೆಯಾಗಿದೆ. ಕಳೆದ ಹಲವು ವರ್ಷಗಳಿಂದ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸುವಂತೆ ರೈತರಿಂದ ಒತ್ತಾಯ ಕೇಳಿ ಬಂದಿತ್ತು. ಅಲ್ಲದೆ, ಬಿಜೆಪಿ ಅವಧಿಯಲ್ಲಿ ಚಿಲ್ಲಿ ಮಾರುಕಟ್ಟೆ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದರು.

ಮರೆಮಾಚಿದ ಸರ್ಕಾರ : ಜಿಲ್ಲೆಯ ಮೆಣಸಿನಕಾಯಿಯನ್ನು ದೂರದ ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ಸಾಗಣೆ ವೆಚ್ಚ ದುಬಾರಿಯಾಗಲಿದೆ ಎಂಬ ಉದ್ದೇಶದಿಂದ ನಗರದಲ್ಲಿ ಚಿಲ್ಲಿ ಮಾರುಕಟ್ಟೆ ನಿರ್ಮಿಸಬೇಕು ಎಂಬುದು ರೈತರ ಒತ್ತಾಯವಿತ್ತು. ಚಿಲ್ಲಿ ಮಾರುಕಟ್ಟೆಗಾಗಿ ಕೆಲ ವರ್ಷಗಳ ಹಿಂದಯೇ ಹೊರವಲಯದ ಆಲದಹಳ್ಳಿ ಬಳಿ 23 ಎಕರೆ ಕೂಡ ಸ್ಥಳ ಗುರುತಿಸಲಾಗಿತ್ತು. ಆದರೆ, ಯಾರು ಟೆಂಡರ್ ಪ್ರಕ್ರಿಯೆ ಮುಂದಾಗದೆ ಇದ್ದರಿಂದ ಸರ್ಕಾರದ ಸಂಸ್ಥೆಯ ನಬಾರ್ಡ್ ಮೂಲಕ ಕಾಮಗಾರಿ ಆರಂಭಿಸಲು ಉದ್ದೇಶಿಸಿತು. ಆದರೆ, ಅನುದಾನ ಕೊರತೆಯಿಂದ ಕಾಂಗ್ರೆಸ್ ಸರ್ಕಾರ ಕಳೆದ ಸಾಲಿನ ಬಜೆಟ್‌ನಲ್ಲಿ ಚಿಲ್ಲಿ ಮಾರುಕಟ್ಟೆ ಬಿಟ್ಟು ಕೋಲ್ಡ್ ಸ್ಟೋರೇಜ್ ನಿರ್ಮಿಸುವುದಾಗಿ ಘೋಷಿಸಿತು. ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಜಿಲ್ಲೆಯ ಕೆಲ ಸಂಘಟನೆಗಳು ಹಾಗೂ ರೈತರು ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದರು. ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಹೆಚ್ಚಿನ ಹಾಲಿ ಶಾಸಕರಿದ್ದು ಯಾವ ಒಬ್ಬ ಶಾಸಕರಾಗಲಿ ಚಿಲ್ಲಿ ಮಾರುಕಟ್ಟೆ ನಿರ್ಮಾಣದ ಪ್ರಸ್ತಾಪ ಮಾಡದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದರು. ಸದ್ಯ, ಚಿಲ್ಲಿ ಮಾರುಕಟ್ಟೆ ಕಾಮಗಾರಿಯನ್ನು ಜಿಲ್ಲೆಯ ವಿವಿಧ ಅನುದಾನ ಮೂಲಕ ಆರಂಭಿಸಲು ಇಲ್ಲಿನ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಇರುವುದು ಎದ್ದು ಕಾಣುತ್ತಿದೆ.

ಕೋಟ್... ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೋಲ್ಡ್ ಸ್ಟೋರೇಜ್ ಟೆಂಡರ್ ಪ್ರಕ್ರಿಯೆ ಮಾರ್ಚ್ ತಿಂಗಳಲ್ಲಿ ನಡೆಯಬೇಕಿತ್ತು. ಆದರೆ, ಕೆಲ ಕಾರಣದಿಂದ ದಿನಾಂಕ ಮುಂದೂಡಲಾಗಿದೆ. ಈ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಬಳಿಕ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

- ಎಂ.ನಂಜುಂಡ ಸ್ವಾಮಿ, ಕಾರ್ಯದರ್ಶಿ, ಎಪಿಎಂಸಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net